Friday, July 24, 2026
Join WhatsApp Group
HomeLocal Newsಶಿರಸಿ–ಹಾವೇರಿ ಹೆದ್ದಾರಿ ಅವಾಂತರ | ಬಸ್ ಜರ್ಕ್‌ಗೆ 76 ವರ್ಷದ ವೃದ್ಧೆಗೆ ಫ್ರಾಕ್ಚರ್!

ಶಿರಸಿ–ಹಾವೇರಿ ಹೆದ್ದಾರಿ ಅವಾಂತರ | ಬಸ್ ಜರ್ಕ್‌ಗೆ 76 ವರ್ಷದ ವೃದ್ಧೆಗೆ ಫ್ರಾಕ್ಚರ್!

ಶಿರಸಿ: ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಹದಗೆಟ್ಟಿದ್ದರಿಂದ ಸಾರಿಗೆ ಬಸ್ ಒಂದು ಏಕಾಏಕಿ ಜರ್ಕ್ ಹೊಡೆದು, 76 ವರ್ಷದ ವೃದ್ಧೆಯೊಬ್ಬರು ಕಂಪ್ರೆಷನ್ ಫ್ರಾಕ್ಚರ್‌ಗೆ ಒಳಗಾದ ಘಟನೆ ಇದೀಗ ಬೆಳಕಿಗೆ ಬಂದಿದೆ. ಇದರಿಂದ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಲಲಿತಾ ಹೆಗಡೆ ಅವರು ಪ್ರಸ್ತುತ ಪೂನಾದಲ್ಲಿ ಪತಿ ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ. ಮೊಮ್ಮಗಳ ಮದುವೆ ನಿಮಿತ್ತ ಇತ್ತೀಚೆಗೆ ಶಿರಸಿಗೆ ಆಗಮಿಸಿದ್ದ ಅವರು, ಕಾರ್ಯಕ್ರಮ ಮುಗಿಸಿ ಪೂನಾಕ್ಕೆ ಮರಳಲು ವಿಆರ್‌ಎಲ್ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಶಿರಸಿ ಪಟ್ಟಣ ದಾಟಿ ಹಾವೇರಿ ಮಾರ್ಗದಲ್ಲಿ ಸಾಗುತ್ತಿದ್ದ ವೇಳೆ, ರಸ್ತೆ ಗುಂಡಿಗಳು ಮತ್ತು ಅಸಮತೋಲನದಿಂದ ಬಸ್ ಭಾರೀ ಜರ್ಕ್ ಹೊಡೆದು ಜಂಪ್ ಆಗಿದೆ. ಆ ವೇಳೆ ಸ್ಲೀಪರ್‌ನಲ್ಲಿ ಮಲಗಿದ್ದ ಲಲಿತಾ ಹೆಗಡೆ ಅವರ ಸೊಂಟಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಬೆನ್ನಿನಲ್ಲಿ ತಕ್ಷಣವೇ ಅಸಹನೀಯ ನೋವು ಕಾಣಿಸಿಕೊಂಡಿದೆ.

ಮೊದಲಿಗೆ ಸಾಮಾನ್ಯ ನೋವಿರಬಹುದು ಎಂದುಕೊಂಡ ಅವರು ಪ್ರಯಾಣ ಮುಂದುವರಿಸಿದರು. ಆದರೆ ಸ್ವಲ್ಪ ಹೊತ್ತಿನಲ್ಲೇ ನೋವು ತೀವ್ರಗೊಂಡು ಕುಳಿತುಕೊಳ್ಳಲೂ ಆಗದೆ, ಮಲಗಲೂ ಆಗದೆ ಪೂರ್ಣ ಪ್ರಯಾಣವೇ ಕಷ್ಟಕರವಾಯಿತು.

ಪೂನಾಗೆ ತಲುಪಿದ ಬಳಿಕ ಪೇನ್‌ಕಿಲ್ಲರ್‌ಗಳನ್ನು ತೆಗೆದುಕೊಂಡು ಕೆಲ ದಿನ ನಿರ್ಲಕ್ಷ್ಯ ಮಾಡಿದರೂ, ನೋವು ಕಡಿಮೆಯಾಗದೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಸ್ಕ್ಯಾನ್ ಮತ್ತು ಎಕ್ಸರೇ ಬಳಿಕ ‘ಕಂಪ್ರೆಷನ್ ಫ್ರಾಕ್ಚರ್’ ಆಗಿರುವುದು ದೃಢಪಟ್ಟಿದೆ.

ವಯಸ್ಸು 76 ಇರುವುದರಿಂದ ಶಸ್ತ್ರಚಿಕಿತ್ಸೆ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಮೂರು ತಿಂಗಳ ಔಷಧ ಚಿಕಿತ್ಸೆ, ವಿಶ್ರಾಂತಿ ಹಾಗೂ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ಚಿಕಿತ್ಸೆ ಮುಂದುವರಿಯುತ್ತಿದೆ.

ತೀವ್ರ ನೋವಿನಿಂದ ಬಳಲುತ್ತಿರುವ ಲಲಿತಾ ಹೆಗಡೆ, ಈ ಪರಿಸ್ಥಿತಿಗೆ ಶಿರಸಿ–ಹಾವೇರಿ ರಸ್ತೆಯ ದುರವಸ್ಥೆಯೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಈ ರಸ್ತೆ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ಹಲವು ಬಾರಿ ದೂರುಗಳು ಬಂದಿವೆ. ಅನೇಕರು ಅಪಘಾತಕ್ಕೊಳಗಾಗಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಪಕ್ಕದ ನಿವಾಸಿಗಳು ಧೂಳಿನ ಸಮಸ್ಯೆಯಿಂದ ಆರೋಗ್ಯ ಹಾನಿಗೂ ಒಳಗಾಗುತ್ತಿದ್ದಾರೆ.

ಹೈವೇ ಕಾಮಗಾರಿ ವಿಳಂಬ, ಗುಣಮಟ್ಟದ ಕೊರತೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ರಸ್ತೆ ಇದೀಗ ಸಾವಿನ ಹೆದ್ದಾರಿʼ ಎಂದೇ ಕುಖ್ಯಾತಿ ಪಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share