Monday, September 7, 2026
Join WhatsApp Group
HomeInformationBrain Gymಈಗೀಗ ಸಕ್ಕರೆಯೂ ಕಹಿಯಾಗುತ್ತಿರುವುದೇಕೆ?!

ಈಗೀಗ ಸಕ್ಕರೆಯೂ ಕಹಿಯಾಗುತ್ತಿರುವುದೇಕೆ?!

ದಿನಬಳಕೆಯ ಕಾಫಿ ಅಥವಾ ಚಹಾಕ್ಕೆ ಹಾಕುವ ಸಕ್ಕರೆಯಿಂದ ಹಿಡಿದು, ಹಬ್ಬದ ಸಮಯದಲ್ಲಿ ಮನೆಗೆ ತರುವ ಸಿಹಿತಿಂಡಿಯವರೆಗೆ ಸಕ್ಕರೆ ನಮ್ಮ ದೈನಂದಿನ ಬದುಕಿನಲ್ಲಿನ ಅವಿಭಾಜ್ಯ ಭಾಗ. ಆದರೆ  ಈಗೊಂದು ತಿಂಗಳಲ್ಲಿ ಸಕ್ಕರೆಯ ಬೆಲೆ ನಿಧಾನವಾಗಿ ಏರುತ್ತಿದ್ದು, ಈಗ ಅದರ ಪರಿಣಾಮ ಗ್ರಾಹಕರ ಜೇಬಿನ ಮೇಲೂ ಕಾಣಿಸಿಕೊಳ್ಳುತ್ತಿದೆ.

ಸಕ್ಕರೆಯ ಬೆಲೆ ಏರಿಕೆಗೆ  ಕಬ್ಬಿನ ಉತ್ಪಾದನೆಯಲ್ಲಿನ ಇಳಿಕೆ, ಹವಾಮಾನ ವೈಪರೀತ್ಯ, ಸಕ್ಕರೆ ಕಾರ್ಖಾನೆಗಳಲ್ಲಿನ ಕಡಿಮೆ ದಾಸ್ತಾನು, ಹಬ್ಬಗಳ ಸಂದರ್ಭದಲ್ಲಿ ಹೆಚ್ಚುತ್ತಿರುವ ಬೇಡಿಕೆ ಹಾಗೂ ಮಾರುಕಟ್ಟೆಯಲ್ಲಿನ ದಾಸ್ತಾನುಗಳ ನಿರ್ವಹಣೆ ಸೇರಿದಂತೆ ಹಲವು ಕಾರಣಗಳು ಸೇರಿ ಬೆಲೆ ಏರಿಕೆಗೆ ಕಾರಣವಾಗಿದೆ.

ಭಾರತದಲ್ಲಿ ಸಕ್ಕರೆ ಉತ್ಪಾದನೆಯ ಪ್ರಮಾಣ ಹೆಚ್ಚಾಗಿ ಕಬ್ಬಿನ ಬೆಳೆಯ ಮೇಲೆ ಅವಲಂಬಿತವಾಗಿದೆ. ಕಬ್ಬು ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಹವಾಮಾನದ ಏರುಪೇರು, ಮಳೆ ಮತ್ತು ನೀರಿನ ಲಭ್ಯತೆಯಲ್ಲಿನ ಬದಲಾವಣೆಗಳು ಕಬ್ಬಿನ ಇಳುವರಿಯ ಮೇಲೆ ಪರಿಣಾಮ ಬೀರುತ್ತವೆ. ಈ ಬಾರಿ ಕೆಲವು ಪ್ರಮುಖ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಲಭ್ಯವಾಗದಿರುವುದು ಸಕ್ಕರೆ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ಪರಿಣಾಮವಾಗಿ ಕಾರ್ಖಾನೆಗಳಲ್ಲಿರುವ ಸಕ್ಕರೆಯ ದಾಸ್ತಾನು ಕಡಿಮೆಯಾಗಿದೆ.

ಇದರೊಂದಿಗೆ ಹಬ್ಬಗಳೂ ಸಾಲುಸಾಲಾಗಿ ಸಮೀಪಿಸುತ್ತಿವೆ. ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಮುಂದಿನ ಕೆಲವು ತಿಂಗಳುಗಳಲ್ಲಿ ದೇಶದಾದ್ಯಂತ ಸಿಹಿತಿಂಡಿಗಳ ತಯಾರಿ ಹೆಚ್ಚಾಗುತ್ತದೆ. ಸಿಹಿತಿಂಡಿ ಅಂಗಡಿಗಳು, ಬೇಕರಿಗಳು, ಆಹಾರ ಉತ್ಪಾದನಾ ಕಂಪನಿಗಳು ಸೇರಿದಂತೆ ಹಲವು ವಲಯಗಳಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚುತ್ತದೆ. ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೇಡಿಕೆ ಎದುರಾದಾಗ ಈಗಾಗಲೇ ಕಡಿಮೆಯಾಗಿರುವ ದಾಸ್ತಾನಿನ ಮೇಲೆ ಮತ್ತಷ್ಟು ಒತ್ತಡ ಬೀಳುತ್ತದೆ.

ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಮಾರುಕಟ್ಟೆಯಲ್ಲಿನ ನಿರೀಕ್ಷೆ. ಮುಂದಿನ ದಿನಗಳಲ್ಲಿ ಸಕ್ಕರೆ ಇನ್ನಷ್ಟು ದುಬಾರಿಯಾಗಬಹುದು ಎಂಬ ನಿರೀಕ್ಷೆ ಮೂಡಿದಾಗ ವ್ಯಾಪಾರಿಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಬಳಸುವ ಸಂಸ್ಥೆಗಳು ಮುಂಚಿತವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಇಟ್ಟುಕೊಳ್ಳುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ತಕ್ಷಣ ಲಭ್ಯವಿರುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿ, ಬೆಲೆ ಏರಿಕೆಗೆ ಮತ್ತಷ್ಟು ಒತ್ತಡ ಉಂಟಾಗುತ್ತದೆ.

ಸಕ್ಕರೆಯ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆ ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಕಬ್ಬನ್ನು ಸಕ್ಕರೆ ತಯಾರಿಕೆಗೆ ಬಳಸುವುದರ ಬದಲು ಎಥನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂಬ ಕಾರಣವನ್ನು ಕೆಲವರು ಮುಂದಿಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಪ್ರಸ್ತುತ ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆಯೇ ಪ್ರಮುಖ ಕಾರಣ ಎಂಬುದನ್ನು ತಳ್ಳಿಹಾಕಿದೆ. ಕಡಿಮೆ ಸಕ್ಕರೆ ಉತ್ಪಾದನೆ, ಹವಾಮಾನದ ಪರಿಣಾಮ, ಹಬ್ಬಗಳ ಬೇಡಿಕೆ ಮತ್ತು ಕಡಿಮೆ ದಾಸ್ತಾನು ಸೇರಿದಂತೆ ಹಲವು ಅಂಶಗಳೇ ಈಗಿನ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಸರ್ಕಾರ ಹೇಳಿದೆ.

ಸಕ್ಕರೆಯ ಬೆಲೆ ನಿಯಂತ್ರಿಸಲು ಸರ್ಕಾರವೂ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಕ್ಕರೆ ರಫ್ತಿನ ಮೇಲೆ ನಿಯಂತ್ರಣ, ವ್ಯಾಪಾರಿಗಳ ದಾಸ್ತಾನು ಮಿತಿ ಸೇರಿದಂತೆ ವಿವಿಧ ಕ್ರಮಗಳ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಕ್ಕರೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳುವ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದೆ.

ಸಕ್ಕರೆ ಆಮದು ಮಾಡಿದರೆ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚುತ್ತದೆ. ಪೂರೈಕೆ ಹೆಚ್ಚಾದಾಗ ಬೆಲೆಯ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೆ ಇದರ ಪರಿಣಾಮ ಗ್ರಾಹಕರಿಗೆ ಎಷ್ಟು ಬೇಗ ತಲುಪುತ್ತದೆ ಎಂಬುದು ಆಮದು ಮಾಡಿದ ಸಕ್ಕರೆ ಮಾರುಕಟ್ಟೆಗೆ ಬರುವ ವೇಗ ಹಾಗೂ ಮುಂದಿನ ತಿಂಗಳುಗಳಲ್ಲಿ ದೇಶೀಯ ಸಕ್ಕರೆ ಉತ್ಪಾದನೆ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಹೊಲದಲ್ಲಿ ಕಬ್ಬಿನ ಬೆಳೆ ಎಷ್ಟು ಬೆಳೆಯಲಾಗಿದೆ  ಎನ್ನುವುದರಿಂದ ಹಿಡಿದು ಕಾರ್ಖಾನೆಯಲ್ಲಿ ಸಕ್ಕರೆಯ ಉತ್ಪಾದನೆ, ಸರ್ಕಾರದ ನೀತಿ, ವ್ಯಾಪಾರಿಗಳ ದಾಸ್ತಾನು, ಹಬ್ಬಗಳ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯವರೆಗೆ ಹಲವು ಹಂತಗಳು ಸಕ್ಕರೆಯ ಅಂತಿಮ ಬೆಲೆಯನ್ನು ನಿರ್ಧರಿಸುತ್ತವೆ.

ಒಂದು ಸಣ್ಣ ಚಮಚ ಸಕ್ಕರೆಯ ಹಿಂದೆ ರೈತರ ಹೊಲದಿಂದ ಪ್ರಾರಂಭಿಸಿ ಸಕ್ಕರೆ ಕಾರ್ಖಾನೆ, ವ್ಯಾಪಾರಿಗಳು ಮತ್ತು ಮಾರುಕಟ್ಟೆಯವರೆಗೆ ದೊಡ್ಡ ಆರ್ಥಿಕ ವ್ಯವಸ್ಥೆಯೇ ಕೆಲಸ ಮಾಡುತ್ತದೆ. ಆ ವ್ಯವಸ್ಥೆಯ ಯಾವುದಾದರೂ ಒಂದು ಹಂತದಲ್ಲಿ ಪೂರೈಕೆ ಕಡಿಮೆಯಾದರೂ ಅದರ ಪರಿಣಾಮ ಕೊನೆಗೆ ಗ್ರಾಹಕರ ಕೈ ಸೇರುವ ಸಕ್ಕರೆಯ ಬೆಲೆಯಲ್ಲಿ ಕಾಣಿಸುತ್ತದೆ.

ಹಾಗಾದರೆ ಸಕ್ಕರೆಯ ಬೆಲೆ ಇಳಿಮುಖವಾಗಲಿದೆಯಾ ಎನ್ನುವುದನ್ನು ಈಗಲೇನಿರ್ಧರಿಸುವುದು ತುಸು ಕಷ್ಟವೇ,ಇನ್ನು ಮುಂದಿನ ದಿನಮಾನದಲ್ಲಿ ಹೊಸ ಕಬ್ಬಿನ ಋತುವಿನಲ್ಲಿ ಉತ್ಪಾದನೆ ಹೆಚ್ಚಾದರೆ, ಮಾರುಕಟ್ಟೆಯಲ್ಲಿ ದಾಸ್ತಾನು ಸುಧಾರಿಸಿದರೆ ಮತ್ತು ಹಬ್ಬಗಳ ಬೇಡಿಕೆಯ ಒತ್ತಡ ಕಡಿಮೆಯಾದರೆ ಬೆಲೆ ಇಳಿಯುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಮಾತ್ರ, ಪ್ರತಿದಿನದ ಚಹಾ-ಕಾಫಿಯಲ್ಲಿ ಬೆರೆಸುವ ಸಿಹಿಯ ಬೆಲೆ ಏರಿಕೆಯ ಹಿಂದೆ ಕೃಷಿ, ಹವಾಮಾನ, ಮಾರುಕಟ್ಟೆ ಮತ್ತು ಸರ್ಕಾರದ ನೀತಿಗಳೆಲ್ಲ ಸೇರಿರುವ ಒಂದು ದೊಡ್ಡ ಕಥೆಯಿದೆ..!!‌

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share