Monday, September 7, 2026
Join WhatsApp Group
HomeCrimeಶೇ.300 ಲಾಭದ ಆಸೆಗೆ 30 ಲಕ್ಷ ಕಳೆದುಕೊಂಡ ರೈತ!

ಶೇ.300 ಲಾಭದ ಆಸೆಗೆ 30 ಲಕ್ಷ ಕಳೆದುಕೊಂಡ ರೈತ!

ಟೆಲಿಗ್ರಾಂ ಟ್ರೇಡಿಂಗ್ ಬಲೆಗೆ ಬಿದ್ದ ಸಿದ್ದಾಪುರದ ವ್ಯಕ್ತಿಗೆ ಭಾರೀ ವಂಚನೆ

ಸಿದ್ದಾಪುರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹಣವನ್ನು ಮೂರು ಪಟ್ಟು ಹೆಚ್ಚಿಸಿಕೊಡುವುದಾಗಿ ನಂಬಿಸಿ, ಸಿದ್ದಾಪುರ ತಾಲೂಕಿನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 30 ಲಕ್ಷ ರೂ. ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ.

ಹರ್ತೆಬೈಲು ನಿವಾಸಿ, ಕೃಷಿಕ ಹಾಗೂ ಎಫ್‌ಟಿಟಿಎಚ್ ಸೇವಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಪತಿ ಹೆಗಡೆ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಫೆಬ್ರವರಿ ತಿಂಗಳಲ್ಲಿ ಅವರ ಮೊಬೈಲ್‌ಗೆ ಬಂದಿದ್ದ ಟೆಲಿಗ್ರಾಂ ಲಿಂಕ್ ಮೂಲಕ ಅವರು ಸ್ಟಾಕ್ ಮಾರ್ಕೆಟ್ ಹೂಡಿಕೆ ಸಂಬಂಧಿತ ಗುಂಪೊಂದನ್ನು ಸೇರಿದ್ದರು.

ಗುಂಪಿನ ಅಡ್ಮಿನ್, ಮೆಂಟರ್ ಹಾಗೂ ಸಹಾಯಕರಾಗಿ ಪರಿಚಯಿಸಿಕೊಂಡಿದ್ದ ಆರೋಪಿಗಳು ವಿಶೇಷ ಟ್ರೇಡಿಂಗ್ ಯೋಜನೆ ಮೂಲಕ ಹೂಡಿಕೆ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಹೂಡಿಕೆ ಮೊತ್ತ ಶೇ.100ಕ್ಕಿಂತ ಹೆಚ್ಚು ಲಾಭ ಗಳಿಸಿದರೆ ಶೇ. 20 ಕಮಿಷನ್ ನೀಡಬೇಕೆಂಬ ಷರತ್ತಿನ ಮೇರೆಗೆ ಖಾತೆ ತೆರೆಯಲಾಗಿತ್ತು.

ಆರೋಪಿಗಳ ಮಾತು ನಂಬಿದ ಗಣಪತಿ ಹೆಗಡೆ ಅವರು ಫೆಬ್ರವರಿ 18ರಿಂದ ವಿವಿಧ ಹಂತಗಳಲ್ಲಿ ಯುಪಿಐ ಹಾಗೂ ಆರ್‌ಟಿಜಿಎಸ್ ಮೂಲಕ ಸುಮಾರು 30 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಬಳಿಕ ಅವರ ಹೂಡಿಕೆ ಮೊತ್ತವು ಶೇ.300ರಷ್ಟು ಹೆಚ್ಚಾಗಿದೆ ಎಂದು ತೋರಿಸಲಾಗಿತ್ತು.

ಲಾಭದ ಹಣವನ್ನು ವಾಪಸ್ ಪಡೆಯಲು ಪ್ರಯತ್ನಿಸಿದಾಗ ಆರೋಪಿಗಳು ‘ಕ್ರೆಡಿಟ್ ಸ್ಕೋರ್ ಕಡಿಮೆಯಿದೆ, ಇನ್ನೂ 10 ಲಕ್ಷ ರೂ. ಜಮೆ ಮಾಡಿದರೆ ಮಾತ್ರ ಹಣ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಗಣಪತಿ ಹೆಗಡೆ ಅವರು ತಾವು ಹೂಡಿಕೆ ಮಾಡಿದ್ದ 30 ಲಕ್ಷ ರೂ. ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗದೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸೈಬರ್ ವಂಚಕರು ಇತ್ತೀಚೆಗೆ ಟೆಲಿಗ್ರಾಂ, ವಾಟ್ಸ್ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ‘ಷೇರು ಮಾರುಕಟ್ಟೆ ಹೂಡಿಕೆ’, ‘ದ್ವಿಗುಣ ಲಾಭ’ ಹಾಗೂ ‘ಗ್ಯಾರಂಟಿ ಆದಾಯ’ದ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share