ಹೊನ್ನಾವರ: ಅರ್ಧರಾತ್ರಿ ಮನೆಯ ಹಿಂಭಾಗದಲ್ಲಿ ಸಪ್ಪಳ ಕೇಳಿಸಿತ್ತು. ʻಮನೆಯ ಬೆಕ್ಕೇ ಇರಬೇಕುʼ ಎಂದು ಮನೆಯವರು ನಿರಾಳವಾಗಿ ಮತ್ತೆ ನಿದ್ರೆಗೆ ಜಾರಿದರು. ಆದರೆ ಬೆಳಗ್ಗೆ ಎದ್ದಾಗ ಮೇಲ್ಚಾವಣಿಯ ಹೆಂಚುಗಳು ಜಾಗ ಬದಲಿಸಿದ್ದವು! ಬೆಕ್ಕಿನ ಬದಲು ಕಳ್ಳರೇ ಮನೆಗೆ ಭೇಟಿ ಕೊಟ್ಟಿದ್ದ ಸಂಗತಿ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಯಲಾಗಿದೆ.
ಹೊನ್ನಾವರ ತಾಲೂಕಿನ ನವಿಲಗೋಣದಲ್ಲಿ ನಡೆದ ಈ ವಿಚಿತ್ರ ಕಳ್ಳತನ ಯತ್ನಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾರಾ ಅಶೋಕ ಭಟ್ಟ ಅವರು ನೀಡಿದ ದೂರಿನ ಪ್ರಕಾರ, ಜುಲೈ 28ರಂದು ರಾತ್ರಿ ಊಟ ಮುಗಿಸಿ ಮನೆಯ ಮಹಡಿಯಲ್ಲಿ ಮಲಗಿದ್ದರು. ರಾತ್ರಿ ಸುಮಾರು 11.55ರ ವೇಳೆಗೆ ಮನೆಯ ಹಿಂಭಾಗದಲ್ಲಿ ಏನೋ ಸದ್ದು ಕೇಳಿಸಿತಾದರೂ, ಮನೆಯ ಬೆಕ್ಕಿನ ಆಟ ಇರಬಹುದು ಎಂದುಕೊಂಡು ಮತ್ತೆ ನಿದ್ರೆಗೆ ಜಾರಿದ್ದರು.
ಆದರೆ ಮರುದಿನ ಬೆಳಿಗ್ಗೆ ಅಡಿಗೆ ಮನೆಯ ಬಳಿ ಹೋದಾಗ ಮನೆಯ ಮೇಲ್ಚಾವಣಿಯ ಹೆಂಚುಗಳನ್ನು ತೆಗೆದಿರುವುದು, ಕೆಲವು ಹೆಂಚುಗಳು ಒಡೆದಿರುವುದು ಹಾಗೂ ಹಿಂಬಾಗಿಲು ತೆರೆದಿರುವುದು ಕಂಡು ಬೆಚ್ಚಿಬಿದ್ದರು.
ಬಳಿಕ ಪುತ್ರ ವಿಶ್ವನಾಥ ಮನೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ರಾತ್ರಿ ಸುಮಾರು 11.55ರ ವೇಳೆಗೆ ಅಪರಿಚಿತರು ಮನೆಗೆ ನುಗ್ಗಿರುವುದು ಸಿಸಿಟಿವಿ ಫೂಟೇಜ್ನಲ್ಲಿ ಕಂಡುಬಂದಿತ್ತು. ಕಳ್ಳರು ಮನೆಯೊಳಗೆ ನುಗ್ಗಿದ್ದರೂ, ಅದೃಷ್ಟವಶಾತ್ ಯಾವುದೇ ವಸ್ತು ಕಳ್ಳತನ ಮಾಡಲು ಸಾಧ್ಯವಾಗಿಲ್ಲ.
ಇಷ್ಟೊಂದು ಸಾಹಸ ಮಾಡಿ ಬಂದ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎಂಬ ಮಾತು ಈಗ ಊರಿನಲ್ಲಿ ಚರ್ಚೆಗೆ ಕಾರಣವಾಗಿದೆ.
ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತಾರಾ ಭಟ್ಟ ಅವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.