ಗೋಕರ್ಣ: ಪ್ರವಾಸಿಗರ ನೆಚ್ಚಿನ ತಾಣವಾದ ಗೋಕರ್ಣದ ಬೀಚ್ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇಲೆ ಮೂವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜುಲೈ 7ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಗೋಕರ್ಣ ಪೊಲೀಸ್ ಸಿಬ್ಬಂದಿಗೆ ಅನುಮಾನಾಸ್ಪದವಾಗಿ ಕಂಡುಬಂದ ಮೂವರನ್ನು ತಡೆದು ವಿಚಾರಣೆ ನಡೆಸಲಾಯಿತು.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಗಾಂಜಾ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾತ್ರಿ ಸುಮಾರು 10.05ರ ವೇಳೆಗೆ ಕುಡ್ಲೇ ಬೀಚ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದ ಮಹೇಶ ಎಂ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಅನೀಲ್ ಬಿ.ಎಂ. ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.
ದುಬ್ಬನಸಶಿ ಬೀಚ್ ಪ್ರದೇಶದಲ್ಲಿ ರಾತ್ರಿ 7.10ರ ಸುಮಾರಿಗೆ ಸುದರ್ಶನ್ ಜೆಪ್ಪು ಪಟ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ಪ್ರದೇಶದಲ್ಲಿ ರಾತ್ರಿ 7.20ರ ಸುಮಾರಿಗೆ ಬಸವರಾಜ ಸೋಮು ಗೌಡ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತುಗಳ ಬಳಕೆ ತಡೆಗಟ್ಟಲು ಗೋಕರ್ಣ ಪೊಲೀಸರು ಗಸ್ತು ಹಾಗೂ ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸಿರುವುದಾಗಿ ತಿಳಿದುಬಂದಿದೆ.