Friday, July 24, 2026
Join WhatsApp Group
HomeUncategorizedಜನತೆಗೆ ಕತ್ತಲು ಭಾಗ್ಯ; ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ

ಜನತೆಗೆ ಕತ್ತಲು ಭಾಗ್ಯ; ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ

ಯಲ್ಲಾಪುರ: ಬರೋಬ್ಬರಿ ಒಂದು ವಾರದಿಂದ ಯಲ್ಲಾಪುರ ತಾಲೂಕಿನ ಹಲವೆಡೆ ಮಳೆಗಾಲದ ಮಧ್ಯೆ ವಿದ್ಯುತ್ ಸಮಸ್ಯೆ ಜನರನ್ನು ಕಂಗೆಡಿಸಿದೆ. ಗ್ರಾಮೀಣ ಭಾಗದಲ್ಲಿ ದಿನಗಟ್ಟಲೆ ವಿದ್ಯುತ್ ಕಡಿತ, ಪಟ್ಟಣದಲ್ಲೂ ಪದೇಪದೇ ಸರಬರಾಜು ಸ್ಥಗಿತ, ದುರಸ್ತಿ ಕಾರ್ಯ ವಿಳಂಬ ಇವೆಲ್ಲವೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿವೆ. ಇದೇ ಹಿನ್ನೆಲೆಯಲ್ಲಿಯೇ ತಾಲೂಕಿನ ವಿದ್ಯುತ್ ಅವ್ಯವಸ್ಥೆ ವಿರುದ್ಧ ಬಿಜೆಪಿ ಮುಖಂಡರು ಹೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಉಂಟಾಗಿರುವ ವಿದ್ಯುತ್ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ಪ್ರಮುಖರು ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಟ್ಟಣದಲ್ಲಿಯೂ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ವಿದ್ಯುತ್ ಲೈನ್‌ಗಳ ಮೇಲೆ ಬೀಳಬಹುದಾದ ಮರದ ಟೊಂಗೆಗಳನ್ನು ಕತ್ತರಿಸಲಾಗುತ್ತಿತ್ತು. ಆದರೆ ಈ ಬಾರಿ ಆ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಪರಿಣಾಮ ಎಲ್ಲೆಡೆ ಮರ ಹಾಗೂ ಟೊಂಗೆಗಳು ವಿದ್ಯುತ್ ಲೈನ್ ಮೇಲೆ ಬಿದ್ದು ಸರಬರಾಜು ಸ್ಥಗಿತಗೊಳ್ಳುತ್ತಿದೆ. ವಿದ್ಯುತ್ ವ್ಯತ್ಯಯಕ್ಕೆ ಇದೇ ಪ್ರಮುಖ ಕಾರಣ ಎಂದು ಅವರು ಹೇಳಿದರು.

ಅನೇಕ ಕಡೆಗಳಲ್ಲಿ ಟೊಂಗೆಗಳನ್ನು ಕತ್ತರಿಸುವ ಕಾರ್ಯಕ್ಕೆ ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ. ಆದರೆ ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ನಡುವಿನ ಸಮನ್ವಯದ ಕೊರತೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಜನರು ವಿದ್ಯುತ್ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಗ್ರಾಮೀಣ ಭಾಗದ ಜನರೊಂದಿಗೆ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಜನತೆಗೆ ಸಮರ್ಪಕ ಸೇವೆ ನೀಡುವುದು ಇಲಾಖೆಯ ಜವಾಬ್ದಾರಿ. ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಸಮನ್ವಯ ಸಭೆ ನಡೆಸಿ ವಿದ್ಯುತ್ ಲೈನ್‌ಗಳಿಗೆ ಅಡ್ಡಿಯಾಗುವ ಮರದ ಟೊಂಗೆಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಬೇಕು. ಈ ಕಾರ್ಯಕ್ಕೆ ಗ್ರಾಮೀಣ ಭಾಗದ ಜನರು ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದರು.

ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ, ನಿತ್ಯದ ಬದುಕಿನಲ್ಲಿ ವಿದ್ಯುತ್ ಅನಿವಾರ್ಯವಾಗಿದೆ. ನಿರಂತರ ವಿದ್ಯುತ್ ವ್ಯತ್ಯಯದಿಂದ ಜನಜೀವನ ತೊಂದರೆಗೊಳಗಾಗುತ್ತಿದೆ. ನಮಗೆ ಉಚಿತ ವಿದ್ಯುತ್ ಬೇಡ; ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜು ಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಈ ಬಾರಿ ಕೆಲವೆಡೆ ನಿರ್ವಹಣಾ ಕಾಮಗಾರಿ ಕೈಗೊಂಡಿದ್ದರೂ ಜೋರಾದ ಗಾಳಿ ಹಾಗೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಎದುರಾಗುತ್ತಿದೆ. ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕೆ.ಟಿ. ಹೆಗಡೆ, ಸುಬ್ಬಣ್ಣ ಉದ್ದಾಬೈಲ, ರವಿ ದೇವಡಿಗ, ಸೋಮೇಶ್ವರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share