Saturday, May 30, 2026
HomeCrimeಹುಲಿ ಗಣತಿ ಕ್ಯಾಮರಾ ಕಳ್ಳತನ!

ಹುಲಿ ಗಣತಿ ಕ್ಯಾಮರಾ ಕಳ್ಳತನ!

ಅಂಕೋಲಾ: ದೇಶವ್ಯಾಪಿ ಹುಲಿ ಗಣತಿ ಕಾರ್ಯಾಚರಣೆಯ ಅಂಗವಾಗಿ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳನ್ನು ಕಳ್ಳತನ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಹೊಸಕಂಬಿ ಅರಣ್ಯ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ದೂರು ನೀಡಿದ್ದಾರೆ.

ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದಂತೆ ಮೇ 1ರಿಂದ 25ರವರೆಗೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್ ಕಾರ್ಯಾಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಹೊಸಕಂಬಿ ವಲಯದ ಮಾಣಿಕಾರ ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ “ಕಡಿಬ್ಯಾಕ್” ಕಂಪನಿಯ ಎರಡು ಆಫ್‌ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಪ್ರತಿ ಐದು ದಿನಗಳಿಗೊಮ್ಮೆ ಕ್ಯಾಮೆರಾದ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿನ ಮಾಹಿತಿಯನ್ನು ರೇಂಜ್ ಫಾರೆಸ್ಟ್ ಕಚೇರಿಯ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಮೇ 11ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾಗಳು ಇದ್ದವು. ಆದರೆ ಮೇ 13ರಂದು ಕರ್ತವ್ಯಕ್ಕೆ ಹೋದ ಸಿಬ್ಬಂದಿಗೆ ಕ್ಯಾಮೆರಾಗಳು ಕಾಣಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ಕ್ಯಾಮೆರಾಗಳು ಪತ್ತೆಯಾಗಿಲ್ಲ. ಸುಮಾರು 25 ಸಾವಿರ ರೂ ಮೌಲ್ಯದ ಎರಡು ಕ್ಯಾಮೆರಾಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share