ಯಲ್ಲಾಪುರ: ಸಮಾಜದಲ್ಲಿ ಸೌಹಾರ್ದತೆ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಗೀತಾಜ್ಞಾನ ಯಜ್ಞ ಟ್ರಸ್ಟ್‌ನಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಹೆಬ್ಬಾರ್ ನಗರದ ಕಾರ್ಮಿಕ ಭವನದಲ್ಲಿ ಗೀತಾಜ್ಞಾನ ಯಜ್ಞ ಟ್ರಸ್ಟ್ ಯಲ್ಲಾಪುರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೀತೆಯ ಸಂದೇಶಗಳು ಸಮಾಜಕ್ಕೆ ಸಕಾರಾತ್ಮಕ ದಿಕ್ಕು ತೋರಿಸುವ ಶಕ್ತಿಯನ್ನು ಹೊಂದಿದ್ದು, ಇಂತಹ ಕಾರ್ಯಕ್ರಮಗಳು ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಗೀತಾಭಿಮಾನಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ವನಜಾಕ್ಷಿ ಶಿವರಾಮ ಹೆಬ್ಬಾರ್, ಕಾರ್ಯಕ್ರಮದ ಸಂಘಟಕರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.