ಕಾರವಾರ: ಟಿಪ್ಪರ್ ಲಾರಿಯ ಬಾಡಿಯನ್ನು ಕೆಳಗಿಳಿಸದೇ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸಿದ ಪರಿಣಾಮ ಹೆಸ್ಕಾಂ ಇಲಾಖೆಯ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳಿಗೆ ಹಾನಿಯಾದ ಘಟನೆ ಕಾರವಾರ ನಗರದ ದೈವಜ್ಞ ಹಾಲ್ ಸಮೀಪದ ದೋಬಿಘಾಟ್ ರಸ್ತೆಯಲ್ಲಿ ನಡೆದಿದೆ.
ಟಿಪ್ಪರ್ ಚಾಲಕ, ಅವರ್ಸಾ ನಿವಾಸಿ ಶಶಿಧರ ಪುರ್ಸು ನಾಯ್ಕ (57) ಲಾರಿಯಲ್ಲಿದ್ದ ಜಲ್ಲಿಕಲ್ಲು ಖಾಲಿ ಮಾಡಿದ ಬಳಿಕ ಬಾಡಿಯನ್ನು ಕೆಳಗಿಳಿಸದೇ ಹಾಗೆಯೇ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮೇಲ್ಭಾಗದಲ್ಲಿದ್ದ ಹೆಸ್ಕಾಂ ವಿದ್ಯುತ್ ತಂತಿಗೆ ಲಾರಿಯ ಬಾಡಿ ಸಿಕ್ಕಿ ತಂತಿಯನ್ನು ಎಳೆದುಕೊಂಡು ಹೋಗಿದೆ. ಪರಿಣಾಮ ರಸ್ತೆಯ ಎರಡೂ ಬದಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಅವುಗಳಿಗೆ ಆಧಾರವಾಗಿದ್ದ ವಿದ್ಯುತ್ ಕಂಬಗಳು ಮುರಿದು ಹಾನಿಗೊಳಗಾಗಿವೆ.
ಘಟನೆಯಲ್ಲಿ ಹೆಸ್ಕಾಂ ಇಲಾಖೆಗೆ ಸುಮಾರು 1.50 ಲಕ್ಷ ರೂ ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಸಹಾಯಕ ಇಂಜಿನಿಯರ್ ವೆಂಕಟೇಶ ವಾಸುದೇವ ಹೊಸಮನಿ ನೀಡಿದ ದೂರಿನ ಮೇರೆಗೆ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.