Monday, September 7, 2026
Join WhatsApp Group
HomeLocal Newsಉತ್ತರ ಕನ್ನಡಕ್ಕೆ ಧಾರವಾಡವೇ ಹೈಕೋರ್ಟ್!

ಉತ್ತರ ಕನ್ನಡಕ್ಕೆ ಧಾರವಾಡವೇ ಹೈಕೋರ್ಟ್!

ಮಂಗಳೂರು ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡವನ್ನು ಸೇರಿಸದಂತೆ ಶಾಸಕ  ಹೆಬ್ಬಾರ್‌ ಆಗ್ರಹ

ಬೆಂಗಳೂರು: ಮಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡದೆ, ಈಗಿರುವಂತೆ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.

ನಿಯಮ 73ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಯಲ್ಲಿ ಹೆಬ್ಬಾರ್ ಅವರು, ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆ ಧಾರವಾಡ ಹೈಕೋರ್ಟ್ ಪೀಠವೇ ಹತ್ತಿರವಾಗಿದ್ದು, ಮಂಗಳೂರು ಪೀಠದ ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗಲಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತರ ಕನ್ನಡವನ್ನು ಧಾರವಾಡ ಪೀಠದಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದ್ದು, ಕರಾವಳಿ ಭಾಗದಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಸ್ಥಾಪಿಸುವಂತೆ ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳಿಂದ ಮನವಿಗಳು ಬಂದಿವೆ. ಈ ಮನವಿ ಮತ್ತು ಪತ್ರಗಳನ್ನು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಕಳುಹಿಸಲಾಗಿದ್ದು, ಪ್ರಸ್ತಾವನೆ ಹೈಕೋರ್ಟ್‌ನಲ್ಲಿ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದಲ್ಲೇ ಮುಂದುವರಿಸುವಂತೆ ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳಿಂದ ಬಂದ ಮನವಿಗಳನ್ನೂ ಸೂಕ್ತ ಕ್ರಮಕ್ಕಾಗಿ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರದ ಮೂಲಕ ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸದ್ಯ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರ ವ್ಯಾಜ್ಯಗಳನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲೇ ನಿರ್ವಹಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತ ಸಂವಿಧಾನದ ಅನುಚ್ಛೇದ 214 ಹಾಗೂ ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956ರ ನಿಯಮ 51(3)ರನ್ವಯ ರಾಜ್ಯದ ಇತರ ಸ್ಥಳಗಳಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠಗಳನ್ನು ಸ್ಥಾಪಿಸುವ ಅವಕಾಶವಿದೆ. ಅದರಂತೆ 2004ರಲ್ಲಿ ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಸಂಚಾರಿ ಪೀಠಗಳು ಆರಂಭಗೊಂಡಿದ್ದು, 2013ರಲ್ಲಿ ಎರಡೂ ಪೀಠಗಳನ್ನು ಖಾಯಂ ಪೀಠಗಳಾಗಿ ಪರಿವರ್ತಿಸಲಾಗಿದೆ ಎಂದು ಸರ್ಕಾರದ ಉತ್ತರದಲ್ಲಿ ವಿವರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share