Monday, September 7, 2026
Join WhatsApp Group
HomeLocal Newsಪಡಿತರ ಅಕ್ಕಿ; ಮಾರಿದರೂ ಕೇಸ್‌, ಖರೀದಿಸಿದರೂ ಕೇಸ್‌!

ಪಡಿತರ ಅಕ್ಕಿ; ಮಾರಿದರೂ ಕೇಸ್‌, ಖರೀದಿಸಿದರೂ ಕೇಸ್‌!

ಕಾರವಾರ: ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಎರಡೂ ಕಾನೂನುಬಾಹಿರವಾಗಿದ್ದು, ಅಂತಹ ಪ್ರಕರಣಗಳು ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಚ್ಚರಿಕೆ ನೀಡಿದೆ.

ಜಿಲ್ಲೆಯಲ್ಲಿ ಪ್ರಸ್ತುತ 15,819 ಅಂತ್ಯೋದಯ ಅನ್ನ ಯೋಜನೆ ಹಾಗೂ 2,88,920 ಆದ್ಯತಾ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 3,04,739 ಪಡಿತರ ಚೀಟಿದಾರರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರಡಿ ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ.

ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅಡಿಯಲ್ಲಿ ಪ್ರತಿ ಯೂನಿಟ್‌ಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.

ಈ ಅಕ್ಕಿಯನ್ನು ಫಲಾನುಭವಿಗಳು ತಮ್ಮ ಕುಟುಂಬದ ಬಳಕೆಗಾಗಿ ಮಾತ್ರ ಬಳಸಬೇಕಿದ್ದು, ಮಾರಾಟ ಮಾಡುವುದು ಅಥವಾ ಬೇರೆ ರೀತಿಯಲ್ಲಿ ವರ್ಗಾವಣೆ ಮಾಡುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಆಹಾರ ಇಲಾಖೆ ಅಧಿಕಾರಿಗಳು ನಡೆಸುವ ತಪಾಸಣೆ ವೇಳೆ ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿರುವುದು, ಸಾಗಾಟ ಮಾಡುತ್ತಿರುವುದು ಅಥವಾ ಪಡಿತರ ಚೀಟಿದಾರರಿಂದ ಅಕ್ಕಿ ಖರೀದಿಸಿರುವುದು ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ–1955ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಡಿತರ ವ್ಯವಸ್ಥೆಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಇಲಾಖೆಯು ಜಿಲ್ಲಾದ್ಯಂತ ತಪಾಸಣೆಯನ್ನು ತೀವ್ರಗೊಳಿಸಿದ್ದು, ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ, ಆಹಾರ ನಿರೀಕ್ಷಕರು ಅಥವಾ ಕಾರವಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share