ದೆಹಲಿ ಸಭೆಯಲ್ಲಿ ಸಂಸದ ಕಾಗೇರಿ ಆಗ್ರಹ
ಕಾರವಾರ/ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಜಿಲ್ಲೆಯ ‘ಧಾರಣ ಶಕ್ತಿ’ (Carrying Capacity) ಕುರಿತ ಸಮಗ್ರ ಅಧ್ಯಯನ ನಡೆಸುವುದು ಅತ್ಯಗತ್ಯ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ದೆಹಲಿ ನಗರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಕರ್ನಾಟಕದ ಎಲ್ಲಾ ಸಂಸದರೊಂದಿಗೆ ನಡೆದ ರಾಜ್ಯದ ಅಭಿವೃದ್ಧಿ ಕುರಿತ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಪರಿಸರ, ಭೌಗೋಳಿಕ ಹಾಗೂ ಅಭಿವೃದ್ಧಿಯ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಬಳಿಕವೇ ಜಿಲ್ಲೆಯ ಎಲ್ಲ ಪ್ರಸ್ತಾವಿತ ಯೋಜನೆಗಳ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಅಂಕೋಲಾ ವಿಮಾನ ನಿಲ್ದಾಣ ಯೋಜನೆ, ಕೊಂಕಣ ರೈಲ್ವೆ ಅಭಿವೃದ್ಧಿ, ಬಿಎಸ್‌ಎನ್‌ಎಲ್ ಸೇವೆಗಳ ಬಲವರ್ಧನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೊಂಡಿರುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ಒದಗಿಸಬೇಕೆಂಬ ವಿಷಯವನ್ನೂ ಅವರು ಪ್ರಸ್ತಾಪಿಸಿದರು.
ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆವರಿಸಿರುವ ಬರ ಪರಿಸ್ಥಿತಿಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಉಲ್ಲೇಖಿಸಿದ ಕಾಗೇರಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಭೆಯ ಗಮನ ಸೆಳೆದರು.
ಈ ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕರ್ನಾಟಕದ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಭಾಗವಹಿಸಿದ್ದರು.