ದಾಂಡೇಲಿ: ನಗರದ ಜಿ.ಎನ್. ರಸ್ತೆಯಲ್ಲಿರುವ ಹನುಮಾನ್ ಬಾರ್‌ನಲ್ಲಿ ಜಾತಿ ನಿಂದನೆ ಮಾಡಿ ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ದಾಂಡೇಲಿ ನಗರ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜುಲೈ 27ರಂದು ಸಂಜೆ ಸುಮಾರು 6.15ರ ವೇಳೆಗೆ ನಡೆದ ಘಟನೆಯಲ್ಲಿ, ಮಾರುತಿ ನಗರದ ನಿವಾಸಿಗಳಾದ ಅಶೋಕ ದೇಮಣ್ಣ ಗುರವ, ಪೈರೋಜ್ ಅಬ್ದುಲ್ ಸತ್ತಾರ್ ದವಲತ್ತಿ ಹಾಗೂ ಆಸೀಪ್ @ ಅಕ್ಷರ್ ಫಕ್ರುದ್ದೀನ್ ನರಗುಂದ ಇವರೆಲ್ಲರೂ ಹನುಮಾನ್ ಬಾರ್‌ಗೆ ಬಂದಿದ್ದರು. ಅಲ್ಲಿದ್ದ ದೂರುದಾರರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಅದು ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿದೆ.
ಆರೋಪಿಗಳು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಕುಡಗೋಲು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್‌ಪಿ ಶಿವಾನಂದ ಮದರಕಂಡಿ ಹಾಗೂ ದಾಂಡೇಲಿ ವೃತ್ತದ ಸಿಪಿಐ ಶಿವಾನಂದ ಅಂಬಿಗೇರ ಅವರ ಮಾರ್ಗದರ್ಶನದಲ್ಲಿ ವಿಶೇಷ ಪತ್ತೆ ತಂಡ ರಚಿಸಲಾಯಿತು.
ಖಚಿತ ಮಾಹಿತಿಯ ಆಧಾರದ ಮೇಲೆ ಜುಲೈ 28ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕುಡುಗೋಲು, ಕಬ್ಬಿಣದ ರಾಡ್ ಹಾಗೂ ಸ್ಕೂಟಿಯನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡರು.
ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಅಮೀನ್ ಎಂ. ಅತ್ತಾರ್, ಕಿರಣ್ ಬಿ. ಪಾಟೀಲ್, ಎಎಸ್‌ಐಗಳಾದ ರಾಜಪ್ಪ ದೊಡ್ಡಮನಿ, ನಜೀರ್ ಹಳಿಯಾಳಕರ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳವರಿ, ಸುನೀಲ್ ಲುಗಾಡೆ, ಬಸವರಾಜ ತೇಲಸಂಗ್, ರಮೇಶ್ ನಿಂಬರಗಿ, ಪ್ರಸನ್ನಕುಮಾರ ಜಿ.ಎನ್., ಕುಮಾರ ಹರಿಜನ, ಲೋಕೇಶ್ ದೇವರೆಡ್ಡಿ, ಚಂದ್ರಶೇಖರ ಪಾಟೀಲ್ ಮತ್ತು ಉಮೇಶ್ ಹನಗಂಡಿ ಭಾಗವಹಿಸಿದ್ದರು.
dandeli-hanuman-bar-caste-abuse-deadly-weapon-assault-accused-arrested