ಯಲ್ಲಾಪುರ: ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಅಭಿಯಾನ (ಗ್ರಾಮೀಣ) – ವಿಬಿ-ಜಿ ರಾಮ್-ಜಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ ಸೂಚಿಸಿದರು.
ಯಲ್ಲಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಯಲ್ಲಾಪುರ, ಹಳಿಯಾಳ ಹಾಗೂ ದಾಂಡೇಲಿ ತಾಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧತೆ, ಕೂಲಿ ಬೇಡಿಕೆ ಮತ್ತು ಹಂಚಿಕೆ, ಕೂಲಿಕಾರರ ಹಾಜರಾತಿ ನಿರ್ವಹಣೆ, ವೇತನ ಪಾವತಿ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಯೋಜನೆಯ ರೂಪುರೇಷೆಗಳಲ್ಲಿಯೂ ಮಹತ್ವದ ಬದಲಾವಣೆಗಳಾಗಿವೆ ಎಂದು ತಿಳಿಸಿದರು.
ಆದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದು ಯೋಜನೆಯ ಕುರಿತು ಸಮಗ್ರ ಅರಿವು ಹೊಂದಿ, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಮಾಸ್ಟರ್ ಟ್ರೇನರ್‌ಗಳಾದ ಕಿರಣಕುಮಾರ ಎಂ.ಜಿ., ಕುಮಾರ್ ವಾಸನ್, ಗೌರೀಶ್ ಹೆಗಡೆ ಹಾಗೂ ಜಿಲ್ಲಾ ಎಂಐಎಸ್ ಸಂಯೋಜಕ ಶಿವಾಜಿ ಬೊಬ್ಲಿ ತರಬೇತಿ ನೀಡಿದರು.
ಯಲ್ಲಾಪುರ, ಹಳಿಯಾಳ ಮತ್ತು ದಾಂಡೇಲಿ ತಾಲೂಕು ಪಂಚಾಯತ್‌ಗಳ ಸಹಾಯಕ ನಿರ್ದೇಶಕರು (ಗ್ರಾಉ), ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮನರೇಗಾ ತಾಂತ್ರಿಕ ಸಿಬ್ಬಂದಿ, ಟಿಎಂಐಎಸ್, ಐಇಸಿ ಸಂಯೋಜಕರು ಹಾಗೂ ಡಿಇಒಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.