ಗೌಪ್ಯತೆ ಮತ್ತು ಸೈಬರ್ ಭದ್ರತೆ ನಡುವೆ ಹೊಸ ಚರ್ಚೆ
ನವದೆಹಲಿ: ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಕೇವಲ ಯೂಸರ್ ನೇಮ್ ಮೂಲಕ ವಾಟ್ಸಾಪ್‌ನಲ್ಲಿ ಚಾಟ್ ಮಾಡುವ ಹೊಸ ಫೀಚರ್ ಭಾರತದಲ್ಲಿ ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ.
ಈ ಫೀಚರ್‌ನಿಂದ ಸೈಬರ್ ವಂಚನೆಗಳು ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಮೆಟಾ (Meta) ಸಂಸ್ಥೆಗೆ ನೋಟಿಸ್ ನೀಡಿ ಭದ್ರತಾ ಕ್ರಮಗಳ ಕುರಿತು ಸ್ಪಷ್ಟನೆ ಕೇಳಿದ್ದು, ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ಫೀಚರ್ ಬಿಡುಗಡೆ ಮಾಡದಂತೆ ಸೂಚಿಸಿದೆ.
ವಾಟ್ಸಾಪ್ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೊಸ ‘ಯೂಸರ್ ನೇಮ್’ ವ್ಯವಸ್ಥೆಯನ್ನು ರೂಪಿಸಿದೆ. ಪ್ರಸ್ತುತ ಯಾರಿಗಾದರೂ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಬೇಕಾದರೆ ಅವರ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡುವುದು ಅನಿವಾರ್ಯ. ಹೊಸ ಫೀಚರ್ ಜಾರಿಯಾದರೆ ಇನ್‌ಸ್ಟಾಗ್ರಾಮ್, ಎಕ್ಸ್ (ಹಿಂದಿನ ಟ್ವಿಟರ್) ಹಾಗೂ ಟೆಲಿಗ್ರಾಮ್ ಮಾದರಿಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಯೂಸರ್ ನೇಮ್ ನೀಡಲಾಗುತ್ತದೆ. ಹೀಗಾಗಿ ಫೋನ್ ಸಂಖ್ಯೆ ಬಹಿರಂಗಪಡಿಸದೆ ಕೇವಲ ಯೂಸರ್ ನೇಮ್ ಮೂಲಕವೇ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಈ ಫೀಚರ್ ವಿಶೇಷವಾಗಿ ಮಹಿಳೆಯರು, ಉದ್ಯಮಿಗಳು ಹಾಗೂ ಅಪರಿಚಿತರೊಂದಿಗೆ ವ್ಯವಹರಿಸುವವರಿಗೆ ಹೆಚ್ಚಿನ ಗೌಪ್ಯತೆ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೇ ವ್ಯವಸ್ಥೆ ಸೈಬರ್ ಅಪರಾಧಿಗಳಿಗೆ ಹೊಸ ಅವಕಾಶವಾಗಬಹುದು ಎಂಬುದು ಕೇಂದ್ರ ಸರ್ಕಾರದ ಕಳವಳ.
ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಸೇರಿದಂತೆ ವಿವಿಧ ರೀತಿಯ ಸೈಬರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, @CBI_Officer, @DelhiPolice, @PMOIndia ಮುಂತಾದ ಹೆಸರಿನ ನಕಲಿ ಯೂಸರ್ ನೇಮ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ಸುಲಭವಾಗಿ ವಂಚಿಸುವ ಸಾಧ್ಯತೆ ಇದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ರಾಜಕೀಯ ನಾಯಕರು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಸುಳ್ಳು ಮಾಹಿತಿ ಹರಡುವುದು ಅಥವಾ ಹಣ ಸುಲಿಗೆ ಮಾಡುವ ಅಪಾಯವನ್ನೂ ಸರ್ಕಾರ ಉಲ್ಲೇಖಿಸಿದೆ.
ಇದರ ಜೊತೆಗೆ ಮೊಬೈಲ್ ಸಂಖ್ಯೆ ಆಧರಿಸಿ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚುವುದು ತನಿಖಾ ಸಂಸ್ಥೆಗಳಿಗೆ ತುಸು ಸುಲಭವಾಗಿದ್ದರೆ, ಕೇವಲ ಯೂಸರ್ ನೇಮ್ ಆಧಾರಿತ ಖಾತೆಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮೆಟಾಗೆ ನೋಟಿಸ್ ನೀಡಿ, ಈ ಫೀಚರ್‌ನಲ್ಲಿ ಯಾವ ರೀತಿಯ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ, ನಕಲಿ ಸರ್ಕಾರಿ ಅಥವಾ ಗಣ್ಯರ ಹೆಸರಿನ ಖಾತೆಗಳನ್ನು ಹೇಗೆ ತಡೆಯಲಾಗುತ್ತದೆ ಹಾಗೂ ವಂಚನೆಗಳನ್ನು ನಿಯಂತ್ರಿಸಲು ಯಾವ ವ್ಯವಸ್ಥೆ ರೂಪಿಸಲಾಗಿದೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ಯೂಸರ್ ನೇಮ್ ಫೀಚರ್ ಇನ್ನೂ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವ್ಯವಸ್ಥೆ ಸಂಪೂರ್ಣ ಐಚ್ಛಿಕವಾಗಿದ್ದು, ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಅಲ್ಲದೆ ಯೂಸರ್ ನೇಮ್‌ಗಳನ್ನು ಸಾಮಾನ್ಯವಾಗಿ ಹುಡುಕಲು (Search) ಸಾಧ್ಯವಾಗದಂತೆ ಹಾಗೂ ಸರ್ಕಾರಿ ಇಲಾಖೆ, ತುರ್ತು ಸೇವೆಗಳು ಮತ್ತು ಗಣ್ಯರ ಹೆಸರಿನಂತಹ ನಿರ್ದಿಷ್ಟ ಪದಗಳನ್ನು ಯೂಸರ್ ನೇಮ್ ಆಗಿ ಬಳಸುವುದನ್ನು ನಿರ್ಬಂಧಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಒಟ್ಟಿನಲ್ಲಿ, ಒಂದೆಡೆ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಸೈಬರ್ ಭದ್ರತೆ ಮತ್ತು ಸಾರ್ವಜನಿಕರ ಆರ್ಥಿಕ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಈ ಎರಡರ ನಡುವೆ ಸಮತೋಲನ ಸಾಧಿಸುವ ಭದ್ರತಾ ವ್ಯವಸ್ಥೆಯನ್ನು ಮೆಟಾ ರೂಪಿಸಿದ ಬಳಿಕವೇ ಭಾರತದಲ್ಲಿ ವಾಟ್ಸಾಪ್‌ನ ‘ಯೂಸರ್ ನೇಮ್’ ಫೀಚರ್‌ಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ.