ಶಿರಸಿ: ಬೆಳೆ ಸಾಲ ಹಾಗೂ ಕಾರು ಸಾಲದ ಹೊರೆ, ಮಳೆಯ ಅನಿಶ್ಚಿತತೆಯಿಂದ ಕಂಗಾಲಾಗಿದ್ದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಸಿ ತಾಲೂಕಿನ ಇಸಳೂರು ಗ್ರಾಮದ ಹುಲಿದೇವರಸರ ರಸ್ತೆ ಸಮೀಪ ನಡೆದಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೊಳಗಿ ಗ್ರಾಮದ ನಿವಾಸಿ ಲೋಕೇಶ್ ವಿ. (34) ಎಂದು ಗುರುತಿಸಲಾಗಿದೆ.
ಲೋಕೇಶ್ ಎರಡು ವರ್ಷಗಳ ಹಿಂದೆ ಪತ್ನಿಯ ಹೆಸರಿನಲ್ಲಿ ಸುಮಾರು ₹10 ಲಕ್ಷ ಬೆಳೆ ಸಾಲ ಪಡೆದಿದ್ದರು. ಸುಮಾರು ಎಂಟು ತಿಂಗಳ ಹಿಂದೆ ತಮ್ಮ ಹೆಸರಿನಲ್ಲಿ ₹8 ಲಕ್ಷ ಸಾಲ ಪಡೆದು ಕಾರು ಖರೀದಿಸಿದ್ದರು. ಇತ್ತೀಚೆಗೆ ಕೃಷಿಗೆ ಅಗತ್ಯವಿದ್ದ ಗೊಬ್ಬರ ಹಾಗೂ ಔಷಧ ಖರೀದಿಸಲು ಪತ್ನಿಯ ಸುಮಾರು 3 ತೊಲೆ ಚಿನ್ನದ ನೆಕ್ಲೆಸ್‌ನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ಅಡವಿಟ್ಟಿದ್ದರು.
ಈ ವರ್ಷ ಮಳೆ ತಡವಾಗಿರುವುದರಿಂದ ಬೆಳೆ ಕೈಕೊಟ್ಟರೆ ಸಾಲವನ್ನು ಹೇಗೆ ತೀರಿಸಬೇಕು ಎಂಬ ಆತಂಕದಲ್ಲಿ ಲೋಕೇಶ್ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ಚಿಂತೆಯನ್ನು ಮನಸ್ಸಿಗೆ ಹಚ್ಚಿಕೊಂಡು ಜುಲೈ 1ರಂದು ಬೆಳಿಗ್ಗೆ 10ರಿಂದ ಸಂಜೆ 7.30ರ ನಡುವಿನ ಅವಧಿಯಲ್ಲಿ ಯಾವುದೋ ವಿಷಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮೃತರ ತಂದೆ ವಿರುಪಾಕ್ಷಪ್ಪ ಅವರು ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.