ಯಲ್ಲಾಪುರ: ಯಲ್ಲಾಪುರ-ಕಳಚೆ ಮಾರ್ಗದಲ್ಲಿ ಭಾನುವಾರ ಸಂಭವಿಸಿದ ಬಸ್ ಅಪಘಾತವು ಕ್ಷಣಾರ್ಧದಲ್ಲಿ ದೊಡ್ಡ ದುರಂತಕ್ಕೆ ಕಾರಣವಾಗಬಹುದಾಗಿದ್ದರೂ, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಅಪಾಯಕಾರಿ ಇಳಿಜಾರು ಹಾಗೂ ತಿರುವುಗಳಿರುವ ಹೆಬ್ವಾರಕುಂಬ್ರಿ–ಚಿಟ್ಟಾಳಮುರಿ ಭಾಗದಲ್ಲಿ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬಿಟ್ಟು ಇಳಿಜಾರಿಗೆ ಇಳಿದ ಘಟನೆ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟುಮಾಡಿತು.
ಇಳಿಜಾರಿನಲ್ಲಿ ಮಣ್ಣಿನ ದಿಬ್ಬ ಇರುವುದರಿಂದ ಬಸ್ ಮುಂದೆ ಸಾಗದೇ ನಿಂತುಬಿಟ್ಟಿದೆ. ಈ ಮಣ್ಣಿನ ದಿಬ್ಬವೇ ಬಸ್ ಅನ್ನು ತಡೆದ ಕಾರಣ ದೊಡ್ಡ ದುರಂತ ತಪ್ಪಿದಂತಾಗಿದೆ. ಬಸ್ ಆ ದಿಬ್ಬವನ್ನು ದಾಟಿದ್ದರೆ ಮುಂದೆ ಇರುವ ಕಳಚೆಯ ತಗ್ಗು ಪ್ರದೇಶಕ್ಕೆ ಬಸ್ ಇಳಿಯುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಸಂಭವಿಸಿದ ವೇಳೆ ಬಸ್ಸಿನಲ್ಲಿ ಒಟ್ಟು 19 ಮಂದಿ ಪ್ರಯಾಣಿಕರು ಇದ್ದರು. ಚಾಲಕ ಮತ್ತು ನಿರ್ವಾಹಕರೂ ಸೇರಿದಂತೆ ಎಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇತ್ತೀಚೆಗೆ ಸಾರಿಗೆ ಸಂಸ್ಥೆಯ ಗ್ರಾಮೀಣ ಪ್ರದೆಸಗಳಿಗೆ ತೆರಳುವ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು, ಚಾಲಕನ ನಿಯಂತ್ರಣಕ್ಕೆ ಸಿಗದೇ ಧರೆಗೆ ಗುದ್ದಿ ನಿಲ್ಲುವ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಪ್ರಯಾಣಿಕರ ಸುರಕ್ಷತೆಯ ಖಾತ್ರಿಯ ಬಗ್ಗೆ ಅನುಮಾನ ಹುಟ್ಟಿಸತೊಡಗಿದೆ.