Wednesday, October 28, 2026
HomeLocal Newsನ. 03ರ ಹೆದ್ದಾರಿ ತಡೆಗೆ 20 ಸಾವಿರ ಜನ ಸೇರುವ ನಿರೀಕ್ಷೆ

ನ. 03ರ ಹೆದ್ದಾರಿ ತಡೆಗೆ 20 ಸಾವಿರ ಜನ ಸೇರುವ ನಿರೀಕ್ಷೆ

ಯಲ್ಲಾಪುರ: ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲೇ ನೀರಿನ ತೀವ್ರ ಕೊರತೆ ಎದುರಾಗುತ್ತಿರುವಾಗ, ಅಘನಾಶಿನಿ–ವರದಾ–ಬೇಡ್ತಿ ನದಿಗಳ ನೀರನ್ನು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಹಾವೇರಿ, ಗದಗ ಜಿಲ್ಲೆಗಳಿಗೆ ಕೊಂಡೊಯ್ಯಲು ಸರ್ಕಾರ ಮುಂದಾಗಿರುವುದು ಅವೈಜ್ಞಾನಿಕ. ಈ ಯೋಜನೆ ವಿರೋಧಿಸಿ ಕಳೆದ ಒಂದೂವರೆ ವರ್ಷದಿಂದ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಕಾರಣ ನವೆಂಬರ್ 3ರಂದು ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೇಳಿದರು.

ಪಟ್ಟಣದ ಅಡಿಕೆಭವನದಲ್ಲಿ ಮಂಗಳವಾರ ನಡೆದ ಚಳವಳಿಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಹೋರಾಟದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ನಡೆಸುವುದು ಕಾನೂನುಬದ್ಧವಲ್ಲ ಎಂಬ ಅರಿವಿದ್ದರೂ, ಸರ್ಕಾರ ಒಂದೂವರೆ ವರ್ಷದಿಂದ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲೇ ಹೋರಾಟ ನಡೆಯುತ್ತಿದ್ದು, ಐತಿಹಾಸಿಕ ಸಂಖ್ಯೆಯಲ್ಲಿ ಜನರು ಸೇರಬೇಕು ಮತ್ತು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯುತವಾಗಿ ಚಳವಳಿ ನಡೆಸಬೇಕು ಎಂಬ ಸೂಚನೆಯನ್ನು ಶ್ರೀಗಳು ನೀಡಿದ್ದಾರೆ ಎಂದು ತಿಳಿಸಿದರು.

ಶಿರಸಿ, ಸಿದ್ದಾಪುರ, ಅಂಕೋಲಾ, ಕುಮಟಾ, ಜೋಯಿಡಾ, ದಾಂಡೇಲಿ ಹಾಗೂ ಮುಂಡಗೋಡು ಭಾಗಗಳಿಂದ 8 ಸಾವಿರಕ್ಕೂ ಹೆಚ್ಚು ಜನರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಭಾಗಗಳಿಂದ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಯಲ್ಲಾಪುರ ತಾಲೂಕಿನ ಪ್ರತಿ ಪಂಚಾಯಿತಿಯಿಂದಲೂ ಜನರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ನಿರೀಕ್ಷಿಸಿದ್ದು, ಒಟ್ಟಾರೆ 20 ಸಾವಿರಕ್ಕೂ ಅಧಿಕ ಜನರು ಸೇರುವ ಸಾಧ್ಯತೆಯಿದೆ. ಪಟ್ಟಣದ ಅಂಗಡಿ ಮುಂಗಟ್ಟುಗಳು, ಔಷಧ ಅಂಗಡಿಗಳು ಹಾಗೂ ಹೋಟೆಲ್‌ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಲು ವ್ಯಾಪಾರಸ್ಥರು ಮುಂದಾಗಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಈ ಹೋರಾಟ ತಾಲೂಕು ಮತ್ತು ಜಿಲ್ಲೆಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇದು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾದ ಹೋರಾಟವಲ್ಲ. ಮುಂದಿನ ಪೀಳಿಗೆಯ ಬದುಕಿನ ಹಿತದೃಷ್ಟಿಯಿಂದ ನಡೆಯುತ್ತಿರುವ ಚಳವಳಿಯನ್ನು ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಂತೆ ಅಹಿಂಸಾತ್ಮಕವಾಗಿ ಹಾಗೂ ಎಚ್ಚರಿಕೆಯಿಂದ ನಡೆಸಬೇಕು ಎಂದು ಹೇಳಿದರು.

ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಹೋರಾಟದಲ್ಲಿ ದೃಢತೆ ಇರಬೇಕು. ಆದರೆ ಶಾಂತಿಗೆ ಭಂಗವಾಗಬಾರದು. ಯಾವುದೇ ಅಶಾಂತಿ ಅಥವಾ ಅಹಿತಕರ ಘಟನೆ ನಡೆದರೆ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಾಳ್ಮೆಯಿಂದಿದ್ದು, ಹಿರಿಯರ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿರುವುದರಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯವಾಗಿದೆ. ನಾಲ್ಕೈದು ಆ್ಯಂಬುಲೆನ್ಸ್‌ಗಳು, ಸಂಚಾರಿ ಶೌಚಾಲಯಗಳು ಹಾಗೂ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಐದಾರು ಗಂಟೆಗಳ ಕಾಲ ಮಹಿಳೆಯರೂ ಹೋರಾಟದಲ್ಲಿ ಪಾಲ್ಗೊಳ್ಳುವುದರಿಂದ ಈ ವ್ಯವಸ್ಥೆಗಳಿಗೆ ಆದ್ಯತೆ ನೀಡಬೇಕು ಎಂದರು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಸಹಕರಿಸಬೇಕು. ಜಿಲ್ಲೆಯ ಮತ್ತು ತಾಲೂಕಿನ ಭವಿಷ್ಯದ ದೃಷ್ಟಿಯಿಂದ ನಡೆಯುವ ಈ ಚಳವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.

ಹೋರಾಟದ ಸಂಚಾಲಕರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ವಿನಾಯಕ ಪೈ, ನರಸಿಂಹ ಸಾತೊಡ್ಡಿ, ಎಂ.ಡಿ. ಮುಲ್ಲಾ, ಪ್ರಸಾದ ಹೆಗಡೆ ಮತ್ತಿತರರು ಮಾತನಾಡಿದರು. ರವಿ ಬದ್ದಿ, ಡಿ.ಜಿ. ಹೆಗಡೆ, ಗಜಾನನ ನಾಯ್ಕ, ಸುರೇಶ ಪಾಟಣಕರ, ವಿ.ಟಿ. ಹೆಗಡೆ, ಭಾಸ್ಕರ ಸಿದ್ದಿ, ರವಿ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯಲ್ಲಾಪುರ ಯೋಜನಾಧಿಕಾರಿ ಸಂತೋಷ ಎ.ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share