ಯಲ್ಲಾಪುರ: ತಾಲೂಕಿನ ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 50 ವರ್ಷದ ಕೃಷಿಕರೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಕಬ್ಬಿನಗುಳಿ ಗ್ರಾಮದ ಪುಂಡಲೀಕ ತುಕಾರಾಮ ಗಾವಡೆ (50) ಎಂದು ಗುರುತಿಸಲಾಗಿದೆ. ಕೃಷಿ ವೃತ್ತಿ ಮಾಡುತ್ತಿದ್ದ ಅವರು, ಈ ವರ್ಷ ಮಳೆ ಸರಿಯಾಗಿ ಬಾರದೆ ಬೆಳೆ ಬೆಳೆಯಲು ಸಾಧ್ಯವಾಗದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಅಲ್ಲದೆ, ಇಬ್ಬರು ಮಕ್ಕಳ ಮದುವೆ ಮಾಡಬೇಕಿದೆ ಎಂದು ಕುಟುಂಬದವರ ಬಳಿ ಹೇಳಿಕೊಳ್ಳುತ್ತಿದ್ದರು ಎಂದು ಯಲ್ಲಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 6ರ ಮಧ್ಯಾಹ್ನ 1.30ರಿಂದ ಅಕ್ಟೋಬರ್ 9ರ ಬೆಳಿಗ್ಗೆ 6.30ರ ನಡುವಿನ ಅವಧಿಯಲ್ಲಿ ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತರ ಸಾವಿನ ಕುರಿತು ಯಾವುದೇ ಸಂಶಯವಿಲ್ಲ ಎಂದು ದೂರುದಾರ ನವೀನ ಬಾಂದೇಕರ ತಿಳಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


