Friday, October 23, 2026
HomeLocal Newsನದಿ ತಿರುವು ಮಾಡಲು ಬಿಡೆವು | ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ಹೋರಾಟದ ಕಹಳೆ

ನದಿ ತಿರುವು ಮಾಡಲು ಬಿಡೆವು | ಫ್ರೀಡಂ ಪಾರ್ಕ್‌ನಲ್ಲಿ ಮೊಳಗಿದ ಹೋರಾಟದ ಕಹಳೆ

ಬೆಂಗಳೂರು: ಪಶ್ಚಿಮ ಘಟ್ಟ ಉಳಿಯಬೇಕು, ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು ರಕ್ಷಣೆ ಆಗಬೇಕು. ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳಿಗೆ ಅವಕಾಶ ನೀಡಬಾರದು ಎಂಬ ಆಗ್ರಹ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಮೊಳಗಿತು.

‘ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ’ ಎಂಬ ಘೋಷವಾಕ್ಯದಡಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಬೃಹತ್ ಧರಣಿಯಲ್ಲಿ ಪರಿಸರ ಕಾಳಜಿ, ಜಿಲ್ಲೆಯ ಹಿತಾಸಕ್ತಿ ಮತ್ತು ನದಿ ಕಣಿವೆ ಜನರ ಸ್ವಾಭಿಮಾನದ ಧ್ವನಿ ಒಟ್ಟಾಗಿ ಅನುರಣಿಸಿತು.

ಧರಣಿಗೆ ಸಂದೇಶ ಕಳುಹಿಸಿದ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಹೋರಾಟದಲ್ಲಿ ಗಣ್ಯರು, ಜನಪ್ರತಿನಿಧಿಗಳು, ಪರಿಸರ ತಜ್ಞರು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿರುವುದು ಸಂತಸದ ಸಂಗತಿ. ಧರಣಿಯಲ್ಲಿ ಕಾಣುವ ಜನಸಂಖ್ಯೆಗಿಂತಲೂ ಅದರ ಹಿಂದಿರುವ ಜನಬೆಂಬಲ ದೊಡ್ಡದು.

ಇಲ್ಲಿ ಸೇರಿರುವ ಪ್ರತಿಯೊಬ್ಬ ಗಣ್ಯರೂ 100 ಜನರಿಗೆ ಸಮಾನ ತೂಕ ಉಳ್ಳವರು. ಹೀಗಾಗಿ ಇಲ್ಲಿ 2 ಸಾವಿರ ಜನ ಸೇರಿದ್ದಾರೆಂದರೆ, ಅದು 2 ಲಕ್ಷ ಧ್ವನಿಗೆ ಸಮಾನ. ಬಹುಶಃ ಉತ್ತರಕನ್ನಡ ಜಿಲ್ಲೆಯಲ್ಲೆಲ್ಲಾದರೂ ಈ ಧರಣಿ ನಡೆದಿದ್ದರೆ ಅಷ್ಟು ಜನ ಸೇರಿರುತ್ತಿದ್ದರು. ಇಲ್ಲಿನ ಜನಸಂಖ್ಯೆ ಮೇಲ್ನೋಟಕ್ಕೆ ಕಡಿಮೆ ಎನಿಸಿದರೂ ಅದರ ಹಿಂದೆ ದೊಡ್ಡ ಜನಶಕ್ತಿಯ ಬೆಂಬಲ ಇರುವುದು ಸತ್ಯ.

ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಆಗುವ ಅನಾಹುತ ಒಂದು ಕಡೆಯಾದರೆ, ಇನ್ನೊಂದು ಕಡೆ, ಯೋಜನೆ ಎಲ್ಲಿಗೆ ಹೋಗಿ ತಲುಪಬೇಕೆಂದು ಸರ್ಕಾರ ಯೋಜಿಸಿದೆಯೋ ಅಲ್ಲಿಗೆ ಹೋಗಿ ತಲುಪಿ ಅಲ್ಲಿನ ಜನರಿಗೂ ಅನುಕೂಲವಾಗುವುದಿಲ್ಲ. ಇಲ್ಲಿಯೂ ಹಾಳು, ಅಲ್ಲಿಯೂ ಹಾಳು. ಹೀಗಾಗಿ, ಈ ಯೋಜನೆಯನ್ನು ಯಾಕಾಗಿ ಮಾಡಬೇಕು? ಸರ್ಕಾರದ ಒಳಗಿದ್ದವರ ಮಾತು ಬೇರೆ, ಸರ್ಕಾರದ ಹೊರತಾಗಿ ಒಬ್ಬೇ ಒಬ್ಬ ವಿಜ್ಞಾನಿ ಈ ಯೋಜನೆ ಸರಿಯಿದೆ ಎಂದು ಈವರೆಗೂ ಹೇಳಿಲ್ಲ. ಆದ್ದರಿಂದ, ಶಾಶ್ವತ ವಿನಾಶ ತಂದುಕೊಡುವ ಈ ರೀತಿಯ ಯೋಜನೆಗಳನ್ನು ಯಾಕೆ ಮಾಡಬೇಕೆಂದು ನಾವೆಲ್ಲರೂ ಪ್ರಶ್ನಿಸಬೇಕಾಗಿದೆ. ಅತ್ಯಂತ ನ್ಯಾಯಯುತ, ವೈಜ್ಞಾನಿಕ ಬೆಂಬಲವಿರುವ, ಸತ್ಯದ ಪರವಾದ ಹೋರಾಟವಿದು. ಇದು ನಿಜಕ್ಕೂ ಸತ್ಯಾಗ್ರಹವೇ ಆಗಿದೆ. ಮುಂದೆಯೂ ಇಂತಹ ಯೋಜನೆಗಳು ಮುನ್ನಲೆಗೆ ಬಂದರೆ ಇದೇ ಒಕ್ಕೊರಲ ಧ್ವನಿ ಮೂಡಲಿ ಎಂಬ ಸಂದೇಶ ರವಾನಿಸಿದ್ದಾರೆ.

ಧರಣಿಯನ್ನುದ್ದೇಶಿಸಿ ಸಾಹಿತಿ ಜಯಂತ ಕಾಯ್ಕಿಣಿ, ನೀರ್ನಳ್ಳಿ ರಾಮಕೃಷ್ಣ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕ ಭೀಮಣ್ಣ ನಾಯ್ಕ, ಟಿ.ವಿ. ರಾಮಚಂದ್ರ, ಪರಿಸರ ತಜ್ಞ ನಾಗೇಶ ಹೆಗಡೆ, ತೇಜಸ್ವಿನಿ ಅನಂತಕುಮಾರ, ತಿಮ್ಮಪ್ಪ ಭಟ್ಟ ಹಾಗೂ ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಹೆಗಡೆ ಆಶೀಸರ, ಕೆಪಿಸಿಸಿ ಸದಸ್ಯ ವಿವೇಕ್‌ ಹೆಬ್ಬಾರ ಮುಂತಾದವರು ಮಾತನಾಡಿದರು.

ಫ್ರೀಡಂ ಪಾರ್ಕ್‌ನಲ್ಲಿ ನೆರೆದಿದ್ದವರ ಘೋಷಣೆಗಳಲ್ಲಿ ಬೇಡ್ತಿ ಕಣಿವೆಯ ಜನರ ಆತಂಕ ಮತ್ತು ಆಕ್ರೋಶ ಸ್ಪಷ್ಟವಾಗಿ ವ್ಯಕ್ತವಾಯಿತು. ಬೇಡ್ತಿ-ಅಘನಾಶಿನಿ ನದಿಗಳನ್ನು ಉಳಿಸಿಕೊಳ್ಳಬೇಕು, ನದಿ ತಿರುವು ಯೋಜನೆಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಭಾಷಣದುದ್ದಕ್ಕೂ ಕೇಳಿಬಂತು.

ಯೋಜನೆ ಜಾರಿಗೆ ಬಂದರೆ ಎದುರಾಗಬಹುದಾದ ಪರಿಣಾಮಗಳ ಕುರಿತು ಮಾತನಾಡಿದ ಹೋರಾಟಗಾರರು, ನದಿ ಕಣಿವೆಗಳ ಅಸ್ತಿತ್ವ ಮತ್ತು ಜಿಲ್ಲೆಯ ಪರಿಸರ ಸಂಪತ್ತಿನ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದರು.

ಧರಣಿಯಲ್ಲಿ ಜನರ ಪಾಲ್ಗೊಳ್ಳುವಿಕೆ, ವೇದಿಕೆಯಲ್ಲಿದ್ದವರ ಮಾತುಗಳು ಹಾಗೂ ಸಂಘಟಿತ ವ್ಯವಸ್ಥೆ ಗಮನ ಸೆಳೆದವು. ಅಚ್ಚುಕಟ್ಟಾಗಿ ಧರಣಿ ಆಯೋಜಿಸಿದ್ದಕ್ಕೆ ಪಾಲ್ಗೊಂಡವರು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಕನ್ನಡದ ನದಿ ಕಣಿವೆಗಳ ರಕ್ಷಣೆಯ ಬೇಡಿಕೆ ಬೆಂಗಳೂರಿನ ಹೃದಯಭಾಗದಲ್ಲಿ ಪ್ರತಿಧ್ವನಿಸಿದ ಈ ಹೋರಾಟ, ನದಿ ಜೋಡಣೆ ಯೋಜನೆಗಳ ಕುರಿತ ಸಾರ್ವಜನಿಕ ಚರ್ಚೆಗೆ ಮತ್ತೊಮ್ಮೆ ವೇದಿಕೆ ಒದಗಿಸಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share