Ad
Ad
Ad
Home Local News ಶಾಲೆ ಗೇಟಿನಾಚೆ ಕಾದಿದೆ ಅಪಾಯ! ಮಕ್ಕಳ ಜೀವಕ್ಕೆ ಹೊಣೆ ಯಾರು?

ಶಾಲೆ ಗೇಟಿನಾಚೆ ಕಾದಿದೆ ಅಪಾಯ! ಮಕ್ಕಳ ಜೀವಕ್ಕೆ ಹೊಣೆ ಯಾರು?

0
33

ಯಲ್ಲಾಪುರ: ಇಲ್ಲಿ ಶಾಲೆ ಮುಗಿಸಿ ಹೊರಬರುವ ಮಕ್ಕಳಿಗೆ ರಸ್ತೆ ದಾಟುವುದೇ ಕಷ್ಟ. ಗೇಟ್‌ನಿಂದ ಹೊರಬಂದರೆ ಮುಂದೆ ವಾಹನಗಳ ಓಡಾಟ, ಪಕ್ಕದಲ್ಲೇ ಅಂಗಡಿಗಳು, ಮಧ್ಯದಲ್ಲಿ ಪಾರ್ಕಿಂಗ್‌. ಇದರಿಂದ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಆರೋಪ ಕೇಳಿಬಂದಿದೆ.

ಯಲ್ಲಾಪುರ ಪಟ್ಟಣದ ಬಸ್‌ ನಿಲ್ದಾಣದ ಎದುರಿನ ಮಾಡೆಲ್‌ ಸ್ಕೂಲ್‌ ಶಾಲಾ ಮಕ್ಕಳಿಗೆ ಈ ಸಮಸ್ಯೆ ಎದುರಾಗುತ್ತಿದೆ. ಶಾಲೆಯ ಕಂಪೌಂಡ್‌ ಹೊರಭಾಗದಲ್ಲಿರುವ ಫುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಪ್ರದೇಶದಲ್ಲಿ ಅಂಗಡಿಗಳನ್ನು ಹಾಕಲು ಪಟ್ಟಣ ಪಂಚಾಯಿತಿ ಅನುಮತಿ ನೀಡಿರುವುದರಿಂದ ಶಾಲೆ ಬಿಡುವ ಸಮಯದಲ್ಲಿ ಮತ್ತಷ್ಟು ಕಿರಿಕಿರಿಯಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ್‌ ಆರೋಪಿಸಿದ್ದಾರೆ.

ಶಾಲೆ ಮುಗಿದ ಬಳಿಕ ಮಕ್ಕಳು ಗುಂಪಾಗಿ ಹೊರಬರುತ್ತಾರೆ. ಗೇಟ್‌ನಿಂದ ರಸ್ತೆಗೆ ಬರಲು ಹಾಗೂ ರಸ್ತೆ ದಾಟಲು ಈಗಾಗಲೇ ವಾಹನಗಳ ಸಂಚಾರದಿಂದ ಎಚ್ಚರಿಕೆ ಅಗತ್ಯವಿದೆ. ಅದರ ನಡುವೆ ಫುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಪ್ರದೇಶದಲ್ಲಿ ಅಂಗಡಿಗಳು ಇರುವುದರಿಂದ ಮಕ್ಕಳಿಗೆ ಸರಾಗವಾಗಿ ನಡೆದು ಹೋಗಲು ಜಾಗದ ಕೊರತೆ ಉಂಟಾಗಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಸ್‌ ನಿಲ್ದಾಣದಿಂದ ಬಸವೇಶ್ವರ ಸರ್ಕಲ್‌ವರೆಗೆ ಸಾರ್ವಜನಿಕರಿಗೂ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿದೆ. ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶದಲ್ಲೇ ಇಂತಹ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಸಮಸ್ಯೆಯ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮೇಶ್ವರ ನಾಯ್ಕ್‌ ದೂರಿದ್ದಾರೆ. ಅಪಘಾತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಅದಕ್ಕೂ ಮುನ್ನವೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೋಮೇಶ್ವರ ನಾಯ್ಕ ಒತ್ತಾಯಿಸಿದ್ದಾರೆ.

ಶಾಲೆ ಬಿಡುವ ಸಮಯದಲ್ಲಿ ಮಕ್ಕಳ ಸುರಕ್ಷತೆಗಾಗಿ ಸ್ಥಳ ಪರಿಶೀಲನೆ ನಡೆಸಿ, ಫುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಜಾಗವನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು. ಅಗತ್ಯವಿದ್ದರೆ ಆ ಸಮಯದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಅಪಘಾತ ಸಂಭವಿಸಿ ಸಾವು-ನೋವು ಉಂಟಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಅದಕ್ಕೂ ಮೊದಲೇ ಸಮಸ್ಯೆ ಪರಿಹರಿಸುವುದು ಅಧಿಕಾರಿಗಳ ಜವಾಬ್ದಾರಿ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್‌ ಇಲಾಖೆ ತಕ್ಷಣ ಗಮನ ಹರಿಸಬೇಕಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!