Ad
Ad
Ad
Home Local Story ಯಲ್ಲಾಪುರದ ಗದ್ದೆಯಿಂದ ಉಡುಪಿ ಕೃಷ್ಣನ ಸನ್ನಿಧಿಗೆ!

ಯಲ್ಲಾಪುರದ ಗದ್ದೆಯಿಂದ ಉಡುಪಿ ಕೃಷ್ಣನ ಸನ್ನಿಧಿಗೆ!

0
13

ದೇಶೀಯ ತಳಿಗಳ ಉಳಿವಿಗೆ ಸೋದೆ ಶ್ರೀಗಳ ವಿಶಿಷ್ಟ ಸಂಕಲ್ಪ

Ad

ಯಲ್ಲಾಪುರ: ಒಂದು ಗದ್ದೆಯಲ್ಲಿ ಭತ್ತ ಬೆಳೆಯಲು ರೈತ ಮಣ್ಣಿನೊಂದಿಗೆ ಸೆಣಸುತ್ತಾನೆ, ಮಳೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಾನೆ, ಬೆಳೆದ ಬೆಳೆಯನ್ನು ಕಟಾವು ಮಾಡಿ ಮನೆಗೆ ತರುತ್ತಾನೆ. ಆದರೆ ಇದೇ ಭತ್ತ ಉಡುಪಿಯ ಶ್ರೀಕೃಷ್ಣನ ಗರ್ಭಗುಡಿಯಲ್ಲಿ ನೈವೇದ್ಯವಾಗಿ ಸಮರ್ಪಣೆಯಾಗುತ್ತದೆ ಎಂದರೆ ರೈತನ ಶ್ರಮ, ಮಣ್ಣಿನ ಸತ್ವ, ದೇಶೀಯ ಭತ್ತದ ಪರಂಪರೆ ಮತ್ತು ಭಕ್ತಿಯ ನಡುವೆ ಬೆಸೆಯುವ ಅಪರೂಪದ ನಂಟಾಗಿ ಕಾಣುತ್ತದೆ!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಸೂರು ಮತ್ತು ಲಾಲಗುಳಿ ಗ್ರಾಮಗಳ ರೈತರ ಗದ್ದೆಗಳಿಂದ ಇಂತಹದ್ದೊಂದು ವಿಶೇಷ ಪಯಣ ಆರಂಭವಾಗಿದೆ. ದೇಶೀಯ ಭತ್ತದ ತಳಿಗಳನ್ನು ಉಳಿಸಿ ಬೆಳೆಸುವುದು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೂಪಿಸಿರುವ ‘ಶುದ್ಧ ನೈವೇದ್ಯ ಸಮರ್ಪಣಮ್’ಯೋಜನೆಯ ಮೂಲಕ, ಇಲ್ಲಿನ ರೈತರು ಬೆಳೆದ ಭತ್ತವೂ ಉಡುಪಿಯ ಶ್ರೀಕೃಷ್ಣನ ನೈವೇದ್ಯಕ್ಕೆ ಸಮರ್ಪಣೆಯಾಗುವ ಸಂಕಲ್ಪದಲ್ಲಿ ಪಾಲುದಾರರಾಗುತ್ತಿದ್ದಾರೆ.

ರೈತನ ಬೆಳೆಗೆ ದೈವಸನ್ನಿಧಿಯ ಗೌರವ

ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಈ ಯೋಜನೆಯ ಯಶಸ್ಸಿಗಾಗಿ ಯಲ್ಲಾಪುರ ತಾಲೂಕಿನ ಕಳಸೂರು ಮತ್ತು ಲಾಲಗುಳಿ ಗ್ರಾಮಗಳಲ್ಲಿ ಸಂಚರಿಸಿ, ಕೃಷಿಕರೊಂದಿಗೆ ಸಂವಾದ ನಡೆಸಿದ್ದಾರೆ. ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಮತ್ತು ಸೋದೆ ಶ್ರೀವಾದಿರಾಜ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಈ ಯೋಜನೆಯ ಉದ್ದೇಶ, ಕೃಷಿಯನ್ನು ಕೇವಲ ಇಳುವರಿ ಮತ್ತು ಆದಾಯದ ಲೆಕ್ಕಾಚಾರಕ್ಕೆ ಸೀಮಿತಗೊಳಿಸದೆ, ದೇಶೀಯ ಭತ್ತದ ತಳಿಗಳ ಸಂರಕ್ಷಣೆ ಹಾಗೂ ಸಾವಯವ ಪದ್ಧತಿಯ ಮುಂದುವರಿಕೆಗೆ ಧಾರ್ಮಿಕ ನಂಬಿಕೆಯನ್ನೂ ಬೆಂಬಲವಾಗಿ ಜೋಡಿಸುವುದು.

ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಉಡುಪಿಯ ಶ್ರೀಕೃಷ್ಣನಿಗೆ ಪ್ರತಿದಿನ ವರ್ಷಪೂರ್ತಿ ಒಂದೊಂದು ದೇಶೀಯ ಭತ್ತದ ತಳಿಯ ಅಕ್ಕಿಯಿಂದ ತಯಾರಿಸಿದ ನೈವೇದ್ಯ ಸಮರ್ಪಿಸಬೇಕು ಎಂಬುದು ಶ್ರೀಪಾದರ ಸಂಕಲ್ಪ. ಈ ಉದ್ದೇಶ ಈಡೇರಲು ದೇಶೀಯ ಭತ್ತದ ತಳಿಗಳನ್ನು ಬೆಳೆಯುವ ರೈತರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಹೀಗಾಗಿ, ರೈತರ ಬಳಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಯೋಜನೆಯನ್ನು ಕೃಷಿಭೂಮಿಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ.

ಲಾಲಗುಳಿ-ಕಳಸೂರಿನಲ್ಲಿ ಕೃಷಿಯೇ ಆರಾಧನೆ

ಇತ್ತೀಚೆಗೆ ಕಳಸೂರಿನ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ದೇಶೀಯ ಭತ್ತದ ತಳಿಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಾವಯವ ಕೃಷಿ ಪದ್ಧತಿಯನ್ನು ಸಂರಕ್ಷಿಸಿ ಮುಂದುವರಿಸುವಂತೆ ರೈತರಿಗೆ ಕರೆ ನೀಡಿದರು.

ರೈತರು ತಾವು ಬೆಳೆದ ಭತ್ತ ಮತ್ತು ಅಕ್ಕಿಯನ್ನು ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣನಿಗೆ ಸಮರ್ಪಿಸಿ, ಕೃಷ್ಣಪ್ರಸಾದ ಸ್ವೀಕರಿಸುವ ಮೂಲಕ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಆಶೀರ್ವಚನ ನೀಡಿದರು. ಬಳಿಕ ರೈತರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಲಾಲಗುಳಿಯ ಸಾವಯವ ಗದ್ದೆಗಳಲ್ಲಿ ಶ್ರೀಗಳ ಹೆಜ್ಜೆ

ಸಾವಯವ ಕೃಷಿಗೆ ಹೆಸರಾಗಿರುವ ಲಾಲಗುಳಿ ಗ್ರಾಮದಲ್ಲಿ ಮಹಾಬಲೇಶ್ವರ ಭಟ್ ಅರೆಗುಳಿ ಹಾಗೂ ಶ್ರೀಧರ ಭಟ್ ಅವರ ಭತ್ತದ ಗದ್ದೆಗಳಿಗೆ ಶ್ರೀಪಾದರು ಭೇಟಿ ನೀಡಿ, ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು. ರೈತರೊಂದಿಗೆ ಮಾತುಕತೆ ನಡೆಸಿ, ಸಾವಯವ ಕೃಷಿಯನ್ನು ಇನ್ನಷ್ಟು ವಿಸ್ತರಿಸುವಂತೆ ಪ್ರೋತ್ಸಾಹಿಸಿದರು.

ದೇಶೀಯ ಭತ್ತದ ತಳಿಗಳು ಕೃಷಿ ಪರಂಪರೆಯ ಭಾಗವಾಗಿದ್ದು, ಅವುಗಳನ್ನು ಉಳಿಸುವ ಪ್ರಯತ್ನ ಮುಂದುವರಿಯಲು ರೈತರ ಆಸಕ್ತಿ, ಬೀಜಗಳ ಲಭ್ಯತೆ ಮತ್ತು ಕೃಷಿಗೆ ದೊರೆಯುವ ಬೆಂಬಲವೂ ಮುಖ್ಯ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಸಂಸ್ಥೆಯೊಂದು ದೇಶೀಯ ಭತ್ತದ ಅಕ್ಕಿಯನ್ನು ನೈವೇದ್ಯಕ್ಕೆ ಬಳಸುವ ಸಂಕಲ್ಪ ಕೈಗೊಳ್ಳುವುದು, ಈ ತಳಿಗಳನ್ನು ಬೆಳೆಸುವ ರೈತರ ಪ್ರಯತ್ನಕ್ಕೆ ಹೊಸ ಗುರುತನ್ನು ನೀಡುವ ಮಾರ್ಗವಾಗಬಹುದು.

ಉಮಾಶಂಕರ ಭಟ್ ಜಡ್ಡಿಗದ್ದೆ, ನಾರಾಯಣ ಭಟ್ ಕರುಮನೆ, ಮಹೇಶ್ ದೇಸಾಯಿ, ಶ್ರೀರಾಮ ಭಟ್‌ ಲಾಲಗುಳಿ, ಸೋಮಲಿಂಗ ಶಿರ್ನಾಳ್ಕರ್ ಮುಂತಾದವರು ಕಳಸೂರಿನ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಶ್ರೀಪಾದರು ಕರಡೊಳ್ಳಿಯ ಸ್ವರ್ಣವಲ್ಲೀ ಮಠದ ಶ್ರೀ ಗೋವರ್ಧನ ಗೋಶಾಲೆಗೆ ಭೇಟಿ ನೀಡಿ ಗೋಗ್ರಾಸ ಸಮರ್ಪಿಸಿದರು.

ಈ ಎಲ್ಲ ಕಾರ್ಯಕ್ರಮಗಳಿಗೆ ಸ್ವರ್ಣವಲ್ಲೀ ಶ್ರೀಗಳು ತಮ್ಮ ಸಂದೇಶ ನುಡಿಗಳನ್ನು ತಲುಪಿಸಿ, ಯೋಜನೆ ಅಭಿನಂದನಾರ್ಹವಾಗಿದೆ ಎಂದು ಆಶೀರ್ವದಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!