ಯಲ್ಲಾಪುರ: ಪಟ್ಟಣದ ಬಿಸಗೋಡ ರಸ್ತೆ ಮಾರ್ಗದಲ್ಲಿರುವ ಸ್ಮಶಾನದ ಪಕ್ಕದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ನಾಲ್ವರು ಆರೋಪಿಗಳೊಂದಿಗೆ 58.8 ಕೆಜಿ ಶ್ರೀಗಂಧ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದೆ.
ಬಂಧಿತರನ್ನು ಯಲ್ಲಾಪುರ ತಾಲೂಕಿನ ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ಧಿ, ಅಂಕೋಲಾ ತಾಲೂಕಿನ ಕಮ್ಮಾಣಿಯ ರವಿ ಕೃಷ್ಣ ಸಿದ್ಧಿ, ಯಲ್ಲಾಪುರದ ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ಧಿ ಹಾಗೂ ಲಕ್ಷ್ಮಣ ಪ್ರಭಾಕರ ಸಿದ್ಧಿ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಜ್ರಳ್ಳಿಯ ಸತೀಶ ಸಿದ್ಧಿ ತಲೆಮರೆಸಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಸಿಪ್ಪೆ ಕೆತ್ತಿದ 12 ಶ್ರೀಗಂಧದ ತುಂಡುಗಳು 3.80 ಕೆಜಿ ಹಾಗೂ ಸಿಪ್ಪೆ ಸಹಿತ 17 ತುಂಡುಗಳು 55 ಕೆಜಿ ಸೇರಿದಂತೆ ಒಟ್ಟು 58.80 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕೆಎ-31 ಕೆ-4658 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಸಹಿತ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಯಲ್ಲಾಪುರ ತಾಲೂಕಿನ ವಿವಿಧೆಡೆ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಟಾವು ಮಾಡಿ, ತುಂಡುಗಳನ್ನಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂದು ಅರಣ್ಯ ಇಲಾಖೆ ಆರೋಪಿಸಿದೆ.
ಈ ಸಂಬಂಧ ಕರ್ನಾಟಕ ಅರಣ್ಯ ಕಾಯ್ದೆಯ ಅಡಿಯಲ್ಲಿ ಅರಣ್ಯ ಪ್ರಕರಣ ದಾಖಲಿಸಲಾಗಿದೆ. ಬಂಧಿತ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ಅಜೀಜ್ ಎ. ಶೇಖ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಚ್. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಉಪ ವಲಯ ಅರಣ್ಯಾಧಿಕಾರಿಗಳಾದ ದರ್ಶನ ವಿ.ಎಸ್., ಜಿ. ಸಂತೋಷ, ಶ್ರೀನಿವಾಸ ನಾಯ್ಕ, ಸಂಜಯಕುಮಾರ ಬೋರಗಲ್ಲಿ, ಪ್ರಭಾಕರ ಬಗಲಿ, ಮಂಜುನಾಥ ಗರ್ಭಗುಡಿ, ಶರಣಬಸು ದೇವರ, ಶ್ರೀಧರ ಸಜ್ಜನ, ಉಮೇಶ ಹೊಸಮನಿ ಹಾಗೂ ಗಸ್ತು ಅರಣ್ಯ ಪಾಲಕರಾದ ಶಹನವಾಜ್ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ ಬಡಿಗೇರ, ಬಸವರೆಡ್ಡಿ ರಡ್ಡೇರ, ಸತೀಶ ಕುಂಬಾರ, ಗೌರೀಶ ನಾಯ್ಕ, ರಾಮು ಕೊಕರೆ, ಶಿವಾನಂದ ಯಾವಗಲ್, ಗಣೇಶ ಸೇರಿದಂತೆ ವಾಹನ ಚಾಲಕರಾದ ಆನಂದ, ದಿನೇಶ, ಪ್ರಶಾಂತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


