ಪಿರಿಯಾಪಟ್ಟಣ ತಾಲೂಕಿನ ಅಂಬಲಾರೆ ಗ್ರಾಮದಿಂದ ಬಿಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆ ಏರಿ ಮೇಲಿನ ಮುಖ್ಯರಸ್ತೆಯಲ್ಲಿ ಕೆರೆ ಗೋಡು ಮಣ್ಣು ಬಿದ್ದಿರುವುದರಿಂದ ರಸ್ತೆ ಕೆಸರುಮಯವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೆರೆಯಲ್ಲಿನ ಗೋಡು ಮಣ್ಣನ್ನು ಸಾಗಿಸುವ ವೇಳೆ ವಾಹನಗಳಿಂದ ರಸ್ತೆ ಮೇಲೆ ಮಣ್ಣು ಚೆಲ್ಲಲ್ಪಟ್ಟು, ಅದು ರಸ್ತೆಗೆ ಅಂಟಿಕೊಂಡಿದೆ. ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರೆ ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಈ ರಸ್ತೆ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರತಿದಿನ ಶಾಲಾ ವಾಹನಗಳು, ಖಾಸಗಿ ವಾಹನಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ.
ರಸ್ತೆ ಕೆಸರುಮಯವಾಗಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.ಇದಲ್ಲದೆ, ಈ ಭಾಗದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಓಡಾಟ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮೇಲಿರುವ ಗೋಡು ಮಣ್ಣನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಪ್ರಕಾಶ್, ಸಂತೋಷ್ ಪಾಟೀಲ್, ಮಹೇಶ್, ರಾಘವೇಂದ್ರ, ತ್ರಿನೇಶ್, ಪ್ರಸನ್ನ ಹಾಗೂ ಅರುಣ್ ಒತ್ತಾಯಿಸಿದ್ದಾರೆ.