Saturday, May 30, 2026
HomeState‘ಕಾಲದ ಹೆಜ್ಜೆಯ ಗುರುತು’ ಕೃತಿ ಲೋಕಾರ್ಪಣೆ ಮಾ. 15ಕ್ಕೆ

‘ಕಾಲದ ಹೆಜ್ಜೆಯ ಗುರುತು’ ಕೃತಿ ಲೋಕಾರ್ಪಣೆ ಮಾ. 15ಕ್ಕೆ

(ಸಾಹಿತ್ಯ ಲೋಕಕ್ಕೆ ವಿಶ್ವಾಸ್ ಡಿ. ಗೌಡರ 9ನೇ ಕೃತಿ)

ಹಾಸನ: ಸಕಲೇಶಪುರದ ಖ್ಯಾತ ಬರಹಗಾರರು, ಸಂಘಟಕರು ಹಾಗೂ ಪತ್ರಕರ್ತರಾದ ವಿಶ್ವಾಸ್ ಡಿ. ಗೌಡ ಅವರ ಒಂಬತ್ತನೇ ಕೃತಿ “ಕಾಲದ ಹೆಜ್ಜೆಯ ಗುರುತು” ಕೃತಿ ಲೋಕಾರ್ಪಣೆ ಸಮಾರಂಭವು ಮಾರ್ಚ್‌ 15, 2026ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಲ್ನಾಡ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಡಾ. ಸಿ.ಆರ್. ಜಗದೀಶ್, ಹಿರಿಯ ಸಾಹಿತಿಗಳಾದ ಲಕ್ಷ್ಮಿದೇವಿ ದಾಸಪ್ಪ, ಕರ್ನಾಟಕ ಭವನ ಮಂಡ್ಯದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಹಾಸನದ ಅಧ್ಯಕ್ಷರಾದ ಡಾ. ಹೆಚ್.ಎಲ್. ಮಲ್ಲೇಶ್ ಗೌಡ, ಉದಯ ವರದಿ ಪತ್ರಿಕೆಯ ಸಂಪಾದಕರಾದ ವೆಂಕಟೇಶ್, ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ. ಬರಾಳು ಶಿವರಾಮ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜು ಹಾಸನದ ಪ್ರಾಂಶುಪಾಲರಾದ ಇರ್ಷಾದ್ ಪಾಷಾ ಅವರು “ಕಾಲದ ಹೆಜ್ಜೆಯ ಗುರುತು” ಕೃತಿಯನ್ನು ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಬರಹಗಾರರ ಸಂಘದ ಹಾಸನ ಜಿಲ್ಲಾ ಅಧ್ಯಕ್ಷರಾದ ಸುಂದರೇಶ ಡಿ. ಉಡುವಾರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಸಕಲೇಶಪುರ ಮೂಲದ ವಿಶ್ವಾಸ್ ಡಿ. ಗೌಡ ಅವರು ತಮ್ಮ ಚಿಂತನೆಗಳು ಹಾಗೂ ಜೀವನಾನುಭವಗಳನ್ನು ಒಳಗೊಂಡ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಪಡೆದಿದ್ದಾರೆ. ಅವರು ಇದುವರೆಗೆ “ಕತ್ತರಿಘಟ್ಟ ಮತ್ತು ಹರಿಸೇವಾ”, “ನೆನಪುಗಳ ಖಾತೆ”, “ಬಾಳೊಂದು ಚೈತ್ರಾಮಯ ”, “ಚಿಂತನ ಚೈತ್ರ”, “ಭಾವನೆಗಳ ಪ್ರತಿರೂಪ”, “ವಿಶ್ವಾಸದ ವಿಮರ್ಶೆ”, “ನೆಮ್ಮದಿಯ ವಿಳಾಸವೆಲ್ಲಿದೆ” ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಅವರಿಗೆ ಕರ್ನಾಟಕ ಸಾಹಿತ್ಯ ಸೌರಭ ರಾಜ್ಯ ಪ್ರಶಸ್ತಿ, ಸ್ವರ್ಣ ಸಿರಿ ಪ್ರಶಸ್ತಿ, ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಜೊತೆಗೆ ರೋಟರಿ ಕ್ಲಬ್ ವತಿಯಿಂದ ನೀಡುವ ಪ್ರತಿಷ್ಠಿತ ಅತ್ಯುತ್ತಮ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
“ಕಾಲದ ಹೆಜ್ಜೆಯ ಗುರುತು” ಕೃತಿ ಜೀವನದ ಅನುಭವಗಳು ಮತ್ತು ಸಮಾಜದ ವಾಸ್ತವತೆಗಳನ್ನು ಒಳಗೊಂಡ ಚಿಂತನೆಗಳ ಸಂಕಲನವಾಗಿದ್ದು, ಓದುಗರಿಗೆ ಹೊಸ ಮನನ ನೀಡುವ ಕೃತಿಯಾಗಲಿದೆ ಎಂದು ಸಾಹಿತ್ಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share