Thursday, July 23, 2026
Join WhatsApp Group
HomeStateಬರದ ಅಂಚಿನಲ್ಲಿ ಕರ್ನಾಟಕ!

ಬರದ ಅಂಚಿನಲ್ಲಿ ಕರ್ನಾಟಕ!

ಜಲಾಶಯಗಳಲ್ಲಿ ಅರ್ಧಕ್ಕೂ ಕಡಿಮೆ ನೀರು, ರೈತರಲ್ಲಿ ಆತಂಕ

ಕೆನರಾ ನೆಕ್ಸ್ಟ್‌ ನ್ಯೂಸ್‌ಡೆಸ್ಕ್‌, ಬೆಂಗಳೂರು: ಕ್ಯಾಲೆಂಡರ್‌ನಲ್ಲಿ ಮುಂಗಾರು ಅರ್ಧ ದಾರಿ ಮುಗಿದಿದೆ. ಆದರೆ, ಕರ್ನಾಟಕದ ಆಕಾಶದಲ್ಲಿ ಮಾತ್ರ ಇನ್ನೂ ಕಾರ್ಮೋಡವಿಲ್ಲ. ಮಲೆನಾಡಿನ ಹಸಿರು ಬೆಟ್ಟಗಳಿಂದ ಹಿಡಿದು ಕರಾವಳಿಯ ಕಡಲ ತೀರ, ಉತ್ತರ ಕರ್ನಾಟಕದ ಬಯಲು ಪ್ರದೇಶಗಳಿಂದ ದಕ್ಷಿಣ ಒಳನಾಡಿನ ಕೃಷಿಭೂಮಿವರೆಗೆ ಮಳೆಯ ಕೊರತೆ ಈಗ ಕೇವಲ ಅಂಕಿ-ಅಂಶವಷ್ಟೇ ಅಲ್ಲದೆ ರೈತರ ಚಿಂತೆ, ಕುಡಿಯುವ ನೀರಿನ ಸಂಕಷ್ಟ ಮತ್ತು ಬರದ ಮುನ್ಸೂಚನೆಯಾಗಿ ಪರಿಣಮಿಸಿದೆ.

ಜುಲೈ 18ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.39ರಷ್ಟು ಕಡಿಮೆ ಮಳೆ ದಾಖಲಾಗಿರುವುದು ಸರ್ಕಾರದ ಅಂಕಿ-ಅಂಶಗಳಿಂದಲೇ ಸ್ಪಷ್ಟವಾಗಿದೆ. ಮಲೆನಾಡಿನಲ್ಲಿ ಶೇ.43, ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.31ರಷ್ಟು ಮಳೆ ಕೊರತೆಯಾಗಿದೆ.

ರಾಜ್ಯದ 26 ಜಿಲ್ಲೆಗಳ 158 ತಾಲೂಕುಗಳಲ್ಲಿ ಮಳೆ ಕೊರತೆ ಕಂಡುಬಂದಿದ್ದು, 20 ತಾಲೂಕುಗಳಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಕೇವಲ 51 ತಾಲೂಕುಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ವಿಜಯನಗರ ಜಿಲ್ಲೆ ಶೇ.67ರಷ್ಟು ಮಳೆ ಕೊರತೆಯೊಂದಿಗೆ ರಾಜ್ಯದಲ್ಲೇ ಅತಿ ಹೆಚ್ಚು ಸಂಕಷ್ಟದಲ್ಲಿದೆ.

ಇದರ ಪರಿಣಾಮ ಈಗ ಜಲಾಶಯಗಳಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 681.83 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಅದು 359.98 ಟಿಎಂಸಿಗೆ ಕುಸಿದಿದೆ. ಅಂದರೆ ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಕೇವಲ ಶೇ.40ರಷ್ಟು ನೀರು ಮಾತ್ರ ಉಳಿದಿದೆ.

ಇನ್ನೂ ಆತಂಕಕಾರಿ ಸಂಗತಿ ಎಂದರೆ, ರಾಜ್ಯದ ಜಲವಿದ್ಯುತ್ ಉತ್ಪಾದನೆಯ ಜೀವನಾಡಿಗಳಾದ ಲಿಂಗನಮಕ್ಕಿ, ಸೂಪಾ ಮತ್ತು ವರಾಹಿ ಜಲಾಶಯಗಳಲ್ಲಿ ಸರಾಸರಿ ಕೇವಲ ಶೇ.23ರಷ್ಟು ನೀರು ಮಾತ್ರ ಲಭ್ಯವಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಮಳೆಯ ಕೊರತೆಯ ಹೊಡೆತ ನೇರವಾಗಿ ಕೃಷಿಗೂ ತಟ್ಟಿದೆ. ಈ ವರ್ಷ 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ, ಇದುವರೆಗೆ ಕೇವಲ 43.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ಐದು ವರ್ಷಗಳ ಸರಾಸರಿ ಬಿತ್ತನೆ ಪ್ರಮಾಣಕ್ಕಿಂತ ಇದು ಗಣನೀಯವಾಗಿ ಕಡಿಮೆಯಾಗಿದೆ. ರೈತರು ಮಳೆಯ ನಿರೀಕ್ಷೆಯಲ್ಲೇ ಹೊಲಗಳನ್ನು ಕಾಯುತ್ತಿದ್ದಾರೆ.

ಕುಡಿಯುವ ನೀರಿನ ಪರಿಸ್ಥಿತಿಯೂ ಆತಂಕಕಾರಿ ಹಂತ ತಲುಪಿದೆ. ರಾಜ್ಯದ 122 ತಾಲೂಕುಗಳ 539 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 112 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಹಾಗೂ 622 ಗ್ರಾಮಗಳಿಗೆ ಬಾಡಿಗೆ ಪಡೆದ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲೂ 17 ಸ್ಥಳೀಯ ಸಂಸ್ಥೆಗಳ 87 ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ರಾಜ್ಯ ಸರ್ಕಾರ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ ಹೆಚ್ಚುವರಿಯಾಗಿ ತಲಾ ₹1 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಜೊತೆಗೆ, ಜಿಲ್ಲಾಧಿಕಾರಿಗಳು ತಕ್ಷಣ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ವರದಿ ಸಲ್ಲಿಸುವಂತೆ ಹಾಗೂ ಮುಂದಿನ 15 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಮಗ್ರ ಬರ ವರದಿ ಕಳುಹಿಸುವಂತೆ ಸೂಚನೆ ನೀಡಲಾಗಿದೆ.

ಮುಂಗಾರು ಇನ್ನೂ ಚೇತರಿಸಿಕೊಳ್ಳಬಹುದೇ? ಅಥವಾ ಈ ಅಂಕಿ-ಅಂಶಗಳೇ ಕರ್ನಾಟಕದ ಬರದ ಅಧಿಕೃತ ಮುನ್ಸೂಚನೆಯಾಗಲಿವೆಯೇ? ಮುಂದಿನ ಕೆಲ ವಾರಗಳ ಮಳೆಯೇ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಪರಿಸ್ಥಿತಿಯ ಭವಿಷ್ಯವನ್ನು ನಿರ್ಧರಿಸಲಿದೆ. ಈಗ ಮಳೆ ಸುರಿಯುವುದು ಕೇವಲ ಪ್ರಕೃತಿಯ ಅಗತ್ಯವಷ್ಟೇ ಅಲ್ಲ, ಕರ್ನಾಟಕದ ಬದುಕಿನ ಅಗತ್ಯವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share