Friday, July 24, 2026
Join WhatsApp Group
HomeYour Voiceಟ್ರಂಪ್ ಎಂಬ ಮೂರ್ಖನಿಗೆ ಪಾದ್ರಿಗಳು ಆಶೀರ್ವದಿಸಲಿ!

ಟ್ರಂಪ್ ಎಂಬ ಮೂರ್ಖನಿಗೆ ಪಾದ್ರಿಗಳು ಆಶೀರ್ವದಿಸಲಿ!

ಜಾಗತೀಕರಣದ ಮೂಲಕ….. ನಿಜವಾಗಿ ಜಗತ್ತಿನ ಜನರನ್ನೆಲ್ಲ ಎಷ್ಟು ಸುಲಭ ಸುಖ ಲೋಲುಪತೆಯಲ್ಲಿ ತೇಲುವಂತೆ ಶೈಕ್ಷಣಿಕಗೊಳಿಸಲಾಗಿದೆ ಎಂದರೆ ….

ಬಹುಶಃ ಹೆಚ್ಚಿನವರಿಗೆ ನಾವು ನಿತ್ಯ ಬಳಸುವ ಸಂಪನ್ಮೂಲಗಳ ಮೂಲ ಯಾವುದು? ಅದು ಯಾವ ನೆಲದಿಂದ ಎಷ್ಟೆಲ್ಲ ಜನರ ಕಷ್ಟದಿಂದ, ಎಷ್ಟು ವ್ಯಾಪಾರಿಗಳ ಲಾಭ ದಾಟಿ, ತೆರಿಗೆ ಮರುತೆರಿಗೆಗಳನ್ನೂ ಸುಲಿದು ನಮ್ಮ ಉಪಯೋಗಕ್ಕೆ ಬಂದಿದೆ ಎಂಬ ಸಂಗತಿಯೇ ಗೊತ್ತಿರಲಿಕ್ಕಿಲ್ಲ.

ನಾಳೆ ನಮಗೆ ಸಿಗುವ ಪೆಟ್ರೋಲ್, ಡೀಸೆಲ್ ಬಂದ್ ಆದರೆ ಎಂಬ ಭಯವೇನೂ ಇಲ್ಲದೆ ಜನ ಲಕ್ಷಾಂತರ-ಕೋಟ್ಯಾಂತರ ರೂಪಾಯಿಗಳ ವಾಹನ ಖರೀದಿಸುತ್ತಾರೆ.

ಒಲೆಯಲ್ಲಿ ಸುಲಭ ಬೆಂಕಿ ಹೊತ್ತುವ ಸಂಭ್ರಮದಲ್ಲಿ ಅಡುಗೆ ಬೇಯಿಸುತ್ತಾರೆ. ಒಲೆಗೆ ಒಟ್ಟುವ ಇಂಧನ ಯಾವುದೋ ದೇಶದ, ಯಾವುದೋ ಪ್ರದೇಶದ ನೆಲ ಬಗೆದು ಯಾರದೋ ಲಾಭದ ಚಟಕ್ಕೆ ಸಿಕ್ಕ ಒಂದು ಆಕಸ್ಮಿಕ ಅದೃಷ್ಟದ ಉರುವಲು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಆ ನೆಲ ಮೂಲವನ್ನು ಗೌರವಿಸುವ ವಿವೇಕವೂ ತಿಳಿದಿರುವುದಿಲ್ಲ.

ಯಾವುದೇ ದೇಶದ ಆಡಳಿತ ಸಹಾ ಇದಕ್ಕೆ ಹೊರತಲ್ಲ. ಹೊರತಾಗಿದ್ದು ಮಾನವ ಸಹಜ ಕಳಕಳಿ ಮತ್ತು ಧೈರ್ಯ ಇದ್ದಿದ್ದರೆ ಇಂತಹ ಒಂದು ಎಡಬಿಡಂಗಿ ಅನಗತ್ಯ ಯುದ್ಧವನ್ನು ನಿಲ್ಲಿಸುವುದೇನೂ ಜಗತ್ತಿಗೆ ದೊಡ್ಡ ವಿಷಯವಾಗಿರಲಿಲ್ಲ. ಸದ್ಯ ಎಲ್ಲರಿಗೂ ಲಾಭ ಬೇಕು ಅಷ್ಟೇ. ಲಾಭವಷ್ಟೇ ಅಲ್ಲ, ನೆತ್ತಿಗೇರಿದ ದುರಾಸೆಯ ಪಿತ್ತ.

ಯುದ್ಧ ನಿಲ್ಲಿಸುವ ಕಾಳಜಿಯಿದ್ದಿದ್ದರೆ ಬೇರೆ ಬೇರೆ ದೇಶದವರು ಹೋಗಲಿ, ನಮ್ಮ ದೇಶದ ಪ್ರಧಾನಿ ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಒಂದು ಅಂತಾರಾಷ್ಟ್ರೀಯ ಖಚಿತ ಹೇಳಿಕೆ, ಭಾಷಣ ಬಿತ್ತರಿಸಬಹುದಿತ್ತು, ಒತ್ತಾಯ ಮಾಡಬಹುದಿತ್ತು.

ಸದ್ಯ ನಮ್ಮ ಪ್ರಧಾನಿ ನಮ್ಮೆಲ್ಲರ ಪಿತಾಮಹ ಮಹಾತ್ಮ ಗಾಂಧಿ ಹುಟ್ಟಿದ ನಾಡಿನಿಂದ ಬಂದವರು ಸಹಾ ಆಗಿರುವುದರಿಂದ ಗಾಂಧಿ ನೆಲಕ್ಕೂ ಒಂದು ಸೂಕ್ತ ಗೌರವವಾಗಬಹುದಿತ್ತು. ಹೋಗಲಿ, ಯುದ್ಧದ ಬಗ್ಗೆ ಮನ್ ಕೀ ಬಾತ್ ಮೂಲಕವಾದರೂ ಗಾಂಧಿ ನೆಲದ ದೇಶ ನಾಯಕನ ಖಚಿತ ಮಾತು ಬರಬಹುದೇ… ಗೊತ್ತಿಲ್ಲ.

ಕೊನೆಗೂ…ಜಾಗತೀಕರಣದ ಸಮ್ಮೋಹನಕ್ಕೊಳಗಾದ ಜಗತ್ತು ತನ್ನ ವ್ಯಾಪಾರ, ವ್ಯಾಪಾರದಿಂದ ದೊರಕುವ ಲಾಭದ ಲೆಕ್ಕಾಚಾರ ಹಾಕುತ್ತಿದೆಯೇ ಹೊರತು ಸದ್ಯ ಉದ್ಭವಿಸಿರುವ ಬಿಕ್ಕಟ್ಟಿನಿಂದ ಜನಸಾಮಾನ್ಯರ ಬದುಕು-ಸಾವು ದುಃಖ ಸಂಭ್ರಮವನಲ್ಲ.

ಉರುವಲು ಕಟ್ಟಿಗೆ ಕಡಿಯುವುದನ್ನು ತಪ್ಪಿಸಲು ರಿಯಾಯಿತಿ ದರದಲ್ಲಿ ಸಿಲೆಂಡರ್ ವಿತರಿಸಿರುವ ನಮ್ಮ ಅರಣ್ಯ ಇಲಾಖೆ, ಬಡವರನ್ನೂ ವ್ಯಾಪಾರೀ ಲಾಭಕ್ಕೆ ಸಿಲುಕಿಸುವುದಕ್ಕಾಗಿ ಉಚಿತ ಸಿಲೆಂಡರ್ ವಿತರಿಸಿದ ಕೇಂದ್ರ ಸರ್ಕಾರ, ಇವೆಲ್ಲ ಈ ಸಮಯದಲ್ಲಿ ಭೂಮಿಯ ನೈಸರ್ಗಿಕ ಸಂಪನ್ಮೂಲ ಕುರಿತಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

 ಯುದ್ಧ ನಿಲ್ಲಲಿ, ಕಚ್ಚಾ ತೈಲ, ಸಿಲಿಂಡರ್ ಗ್ಯಾಸ್ ಕೊರತೆ ದೇಶಕ್ಕೆ ಎಂದೂ ಆಗದಿರಲಿ. ನನ್ನಂತಹ ಗ್ರಾಮೀಣ ಪ್ರದೇಶದ ಜನ ಗ್ಯಾಸ್ ಸಿಗದೇ ಹೋದರೆ ಎಲ್ಲಾದರೂ ನಾಕು ಕಟ್ಟಿಗೆ ಹುಡುಕಿ ತಂದು ಅಡುಗೆ-ಊಟ ಮಾಡಿಕೊಳ್ಳುತ್ತೇವೆ. ಅಭಿವೃದ್ಧಿ ಎಂಬುದು ಅವೈಜ್ಞಾನಿಕವಾಗಿ ಹೆತ್ತ ನಮ್ಮ ದೇಶದ ನಗರಗಳನ್ನು ನಗರ ವ್ಯವಸ್ಥೆ, ಮನಸ್ಥಿತಿಗಳನ್ನು ನೆನೆಸಿಕೊಂಡರೆ ನಿಜವಾಗಿಯೂ ಭಯವಾಗುತ್ತದೆ.

ಯಾರು ಸೋತರೂ ಸರಿ, ಸದ್ಯ ಯುದ್ಧ ನಿಲ್ಲಲಿ. ಯಾವುದೋ ಸಂಪನ್ಮೂಲಗಳನ್ನು ನಂಬಿ ನಾವು ನಿತ್ಯ ಜೀವನಕ್ಕೆ ಅಳವಡಿಸಿಕೊಂಡ ವ್ಯವಸ್ಥೆಗಳು ಅವ್ಯವಸ್ಥಿತವಾಗದಿರಲಿ. ಟ್ರಂಪ್ ಎಂಬ ಮೂರ್ಖನಿಗೆ ಪಾದ್ರಿಗಳು ಆಶೀರ್ವದಿಸಲಿ.

 – ಗಣೇಶ ಹೊಸ್ಮನೆ, ಶಿರಸಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share