Saturday, May 30, 2026
HomeAgricultureಅಪ್ಪೆಮಿಡಿ ಸೀಸನ್‌ ಶುರು: ಮಾರುಕಟ್ಟೆ ತುಂಬ ಘಮಘಮ!

ಅಪ್ಪೆಮಿಡಿ ಸೀಸನ್‌ ಶುರು: ಮಾರುಕಟ್ಟೆ ತುಂಬ ಘಮಘಮ!

ಊಟವೆಂದರೆ ಉಪ್ಪಿನಕಾಯಿ ಅವಿಭಾಜ್ಯ ಅಂಗ. ತಲೆತಲಾಂತರಗಳಿಂದಲೇ ನಮ್ಮ ಊಟಕ್ಕೆ ರುಚಿ, ಸವಿಯ ಮೆರುಗು ನೀಡುತ್ತಿರುವ ಉಪ್ಪಿನಕಾಯಿಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ “ಅಪ್ಪೆಮಿಡಿ” ಉಪ್ಪಿನಕಾಯಿ ಎಂದರೆ ವಿಶೇಷ ರುಚಿ, ಪರಿಮಳ ಮತ್ತು ಪರಂಪರೆಯ ಸಂಕೇತ.

ಉಪ್ಪಿನಕಾಯಿಗಾಗಿ ವಿಶೇಷವಾಗಿ ಗುರುತಿಸಿಕೊಂಡಿರುವ ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಮಾವಿನಕಾಯಿಗಳ ಸೀಸನ್ ಈಗ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಿಂದ ಪಟ್ಟಣಗಳ ಮಾರುಕಟ್ಟೆಗಳತ್ತ ಇವುಗಳ ಆಗಮನ ಜೋರಾಗಿದೆ. ಶಿರಸಿ, ಯಲ್ಲಾಪುರ, ಸಿದ್ಧಾಪುರ ಭಾಗಗಳಿಂದ ಮಾರುಕಟ್ಟೆಗೆ ಬರುವ ಈ ಮಿಡಿಗಳು ತಮ್ಮ ಸುವಾಸನೆಯಿಂದಲೇ ಜನರ ಗಮನ ಸೆಳೆಯುತ್ತವೆ.

ಅಪ್ಪೆಮಿಡಿ ಉಪ್ಪಿನಕಾಯಿಯ ಪ್ರಮುಖ ವೈಶಿಷ್ಟ್ಯ ಅದರ ವಿಶಿಷ್ಟ ಪರಿಮಳ ಮತ್ತು ರುಚಿ. ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಭರಣಿಗಳಲ್ಲಿ ಸಂಗ್ರಹಿಸಿದರೆ, ವರ್ಷಗಳವರೆಗೆ ತನ್ನ ರುಚಿಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಮಲೆನಾಡಿನ ಹೊಳೆ-ಹಳ್ಳಗಳ ದಂಡೆಗಳಲ್ಲಿ ಬೆಳೆದು ಬೆಳೆಯುವ ಈ ಮಿಡಿಮಾವಿನ ಮರಗಳು ಪ್ರತೀ ವರ್ಷವೂ ಕಾಯಿ ಬಿಡುವುದಿಲ್ಲ. ಗ್ರಾಮೀಣ ಭಾಗದ ಸಿದ್ದಿ, ಕುಣಬಿ, ಗೌಳಿ ಸಮುದಾಯದವರಿಗೆ ಅಪ್ಪೆಮಿಡಿ ಒಂದು ಪ್ರಮುಖ ಆದಾಯದ ಮೂಲವೂ ಆಗಿದೆ.

ಕಾಡಿನ ಸನಿಹದಲ್ಲಿರುವ ಇವರು ತಮ್ಮ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ದೊರಕುವ ಮಿಡಿಗಳನ್ನು ಸಂಗ್ರಹಿಸಿ ಪಟ್ಟಣಗಳಿಗೆ ತಂದು ಮಾರಾಟ ಮಾಡುತ್ತಾರೆ. ಕೆಲವರು ಮಧ್ಯವರ್ತಿಗಳಿಗೆ ಸಗಟಾಗಿ ಮಾರಿದರೆ, ಇನ್ನೂ ಕೆಲವರು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಮಿಡಿ ಕೊಯ್ಲು ಕೂಡ ಸುಲಭದ ಕೆಲಸವಲ್ಲ. ಮಿಡಿಗಳು ಜಜ್ಜಿ ಹೋಗದಂತೆ ಮರ ಹತ್ತಿ ನಾಜೂಕಾಗಿ ಕೊಯ್ಯಬೇಕು. ಚೀಲದಲ್ಲಿ ಸಂಗ್ರಹಿಸಿ ನಂತರ ಹಗ್ಗದ ಮೂಲಕ ಕೆಳಕ್ಕೆ ಇಳಿಸಲಾಗುತ್ತದೆ.

ಯಲ್ಲಾಪುರ ಮಾರುಕಟ್ಟೆಯ ವ್ಯಾಪಾರಿಗಳ ಪ್ರಕಾರ, ತೊಟ್ಟು ಸಹಿತವಾಗಿ ಇರುವ ಮಿಡಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ತೊಟ್ಟಿನ ಭಾಗದಲ್ಲಿರುವ ‘ಸೊನೆ’ಯೇ ಅದರ ಪರಿಮಳಕ್ಕೆ ಕಾರಣವಾಗಿದ್ದು, ಅದು ಮುರಿದಿದ್ದರೆ ಮೌಲ್ಯ ಕಡಿಮೆಯಾಗುತ್ತದೆ.

ಉದ್ದನೆಯ ‘ಎಸ್’ ಆಕಾರದ ಅಪ್ಪೆಮಿಡಿಗಳು ಉತ್ತಮ ದರ್ಜೆಯವೆಂದು ಪರಿಗಣಿಸಲ್ಪಡುತ್ತವೆ. ತೊಟ್ಟನ್ನು ಮುರಿದಾಗ ಹೊರಬರುವ ಸೊನೆಗೆ ಬೆಂಕಿ ತಾಕಿದರೆ ತಕ್ಷಣ ಉರಿಯುವುದು, ಅದರ ಗುಣಮಟ್ಟವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ.

ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 100 ಮಿಡಿಗಳಿಗೆ 500ರಿಂದ  800 ರೂ.ರವರೆಗೆ ದರ ಇರುತ್ತದೆ. ಉತ್ತಮ ಗುಣಮಟ್ಟದ ಮಿಡಿಗಳಿಗೆ ಇನ್ನೂ ಹೆಚ್ಚು ಬೆಲೆ ಸಿಗುತ್ತದೆ. ಗ್ರಾಮೀಣ ಪ್ರದೇಶದವರಿಗೆ ಸ್ಥಳೀಯವಾಗಿ ಲಭ್ಯವಾಗುವುದರಿಂದ, ಪಟ್ಟಣಗಳಲ್ಲಿ ಬೇಡಿಕೆ ಹೆಚ್ಚು ಕಂಡುಬರುತ್ತದೆ.

ಮಿಡಿಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಂಗ್ರಹ ವಿಧಾನವೂ ಮುಖ್ಯ. ಭರಣಿಗೆ ತುಂಬುವ ಮೊದಲು ಚೆನ್ನಾಗಿ ಒರೆಸಿ, ನೀರು ತಾಕದಂತೆ ನೋಡಿಕೊಂಡರೆ 3–4 ವರ್ಷಗಳವರೆಗೆ ಸಹ ಅದೇ ರುಚಿಯಲ್ಲಿ ಉಳಿಸಬಹುದು.

ಒಟ್ಟಿನಲ್ಲಿ, ಮಾರುಕಟ್ಟೆಯಲ್ಲಿ ಅಪ್ಪೆಮಿಡಿಯ ಸುವಾಸನೆ ಮೂಗಿಗೆ ತಟ್ಟಿದರೆ, “ನಾಳೆ ತೆಗೆದುಕೊಳ್ಳೋಣ” ಎಂದು ಬಿಟ್ಟುಬಿಡಬೇಡಿ. ಇಲ್ಲವಾದರೆ, ಮುಂದಿನ ಸೀಸನ್‌ವರೆಗೂ ಕಾಯಬೇಕಾಗಬಹುದು!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share