Saturday, May 30, 2026
HomeYour Voiceಹಸಿರಿನಿಂದ ಹೊಗೆಯವರೆಗೆ; ಬದಲಾಗುತ್ತಿದೆ ಭೂಮಿ

ಹಸಿರಿನಿಂದ ಹೊಗೆಯವರೆಗೆ; ಬದಲಾಗುತ್ತಿದೆ ಭೂಮಿ

– ಉಷಾ ಭಟ್, ಎಂಜಿಎಂ ಕಾಲೇಜು, ಉಡುಪಿ.

ಒಂದು ಕಾಲದಲ್ಲಿ ಭೂಮಿಯ ಸುಮಾರು ಶೇ. 60-70 ಭಾಗ ಹಸಿರು ಆವರಣದಿಂದ ಕಂಗೊಳಿಸುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದು ಸುಮಾರು ಶೇ. 30-40ಕ್ಕೆ ಇಳಿದಿದೆ ಎನ್ನುವ ಅಂದಾಜುಗಳು ಆತಂಕ ಹುಟ್ಟಿಸುತ್ತಿವೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ಮಾನವ ಚಟುವಟಿಕೆಗಳು ಪರಿಸರದ ಸಮತೋಲನವನ್ನು ಹಾಳು ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಅರಣ್ಯ ನಾಶವು ಪರಿಸರ ಹಾನಿಗೆ ಪ್ರಮುಖ ಕಾರಣವಾಗಿದೆ. ರಸ್ತೆ, ಕಟ್ಟಡ, ಕೈಗಾರಿಕೆಗಳ ನಿರ್ಮಾಣಕ್ಕಾಗಿ ಸಾವಿರಾರು ಮರಗಳನ್ನು ಕಡಿದು ಹಾಕಲಾಗುತ್ತಿದೆ.

ಹಿಂದೆ ದಟ್ಟ ಕಾಡುಗಳಿದ್ದ ಸ್ಥಳಗಳಲ್ಲಿ ಇಂದು ಕಾಂಕ್ರೀಟ್ ಕಾಡುಗಳು ಬೆಳೆಯುತ್ತಿವೆ. ಇದರ ಪರಿಣಾಮವಾಗಿ ಮಳೆಯ ಪ್ರಮಾಣದಲ್ಲಿ ಸುಮಾರು ಶೇ. 15-20ರಷ್ಟು ಇಳಿಕೆ ಕಂಡುಬಂದಿದೆ ಎಂಬ ವರದಿಗಳು ಸೂಚಿಸುತ್ತವೆ.

ಇದಲ್ಲದೆ ಕೈಗಾರಿಕಾ ವಿಸ್ತರಣೆ ಮತ್ತು ವಾಹನಗಳ ಹೆಚ್ಚಳದಿಂದ ವಾಯು ಮಾಲಿನ್ಯ ತೀವ್ರವಾಗಿ ಏರಿದೆ. ಹಿಂದಿನ ದಶಕದಲ್ಲಿ ಹೋಲಿಸಿದರೆ ಇಂದಿನ ವಾಯು ಮಾಲಿನ್ಯ ಮಟ್ಟವು ಸುಮಾರು ಶೇ. 25-30 ಹೆಚ್ಚಾಗಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ಇದರಿಂದ ಶ್ವಾಸಕೋಶ ಸಂಬಂಧಿತ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಪ್ಲಾಸ್ಟಿಕ್ ಬಳಕೆ ಕೂಡ ಪರಿಸರ ನಾಶಕ್ಕೆ ದೊಡ್ಡ ಕಾರಣವಾಗಿದೆ.

ಪ್ರತಿದಿನ ಸಾವಿರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯ ನದಿಗಳು ಮತ್ತು ಸಮುದ್ರಗಳಿಗೆ ಸೇರುತ್ತಿದೆ. ಇದು ಜಲಚರ ಜೀವಿಗಳಿಗೆ ಅಪಾಯವನ್ನುಂಟುಮಾಡುವುದಲ್ಲದೆ, ನೀರಿನ ಗುಣಮಟ್ಟವನ್ನು ಹಾಳು ಮಾಡುತ್ತಿದೆ. ಹಿಂದೆ ಸ್ವಚ್ಛವಾಗಿದ್ದ ನದಿಗಳು ಇಂದು ಕಲುಷಿತವಾಗುತ್ತಿರುವುದು ದುಃಖಕರ ಸಂಗತಿ.

ಹವಾಮಾನ ಬದಲಾವಣೆಯೂ ಪರಿಸರ ನಾಶದ ಸ್ಪಷ್ಟ ಪರಿಣಾಮವಾಗಿದೆ. ತಾಪಮಾನವು ಕಳೆದ ಕೆಲವು ದಶಕಗಳಲ್ಲಿ ಸುಮಾರು 1ರಿಂದ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಭವಿಷ್ಯದಲ್ಲಿ ಭಾರೀ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಇಂದಿನ ಮಕ್ಕಳಿಗೆ ಪ್ರಕೃತಿಯ ಪರಿಚಯ ಕಡಿಮೆಯಾಗುತ್ತಿರುವುದು ಮತ್ತೊಂದು ಚಿಂತಾಜನಕ ಬೆಳವಣಿಗೆಯಾಗಿದೆ. ಸಸ್ಯ, ಪ್ರಾಣಿ, ಪಕ್ಷಿಗಳ ಬಗ್ಗೆ ತಿಳುವಳಿಕೆ ಕಡಿಮೆಯಾಗುತ್ತಿರುವುದು ಪರಿಸರದ ಜೊತೆಗಿನ ಬಾಂಧವ್ಯವನ್ನು ದುರ್ಬಲಗೊಳಿಸುತ್ತಿದೆ.

ಪರಿಸರ ನಾಶವನ್ನು ತಡೆಯಲು ತಕ್ಷಣದ ಕ್ರಮ ಅಗತ್ಯವಾಗಿದೆ. ಮರಗಳನ್ನು ನೆಡುವುದು ಮಾತ್ರವಲ್ಲ, ಅವುಗಳನ್ನು ಉಳಿಸುವುದು ಕೂಡ ಅತಿ ಮುಖ್ಯ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರನ್ನು ಸಂರಕ್ಷಿಸುವುದು, ಸ್ವಚ್ಛತೆಯನ್ನು ಕಾಪಾಡುವುದು ಇವುಗಳೆಲ್ಲ ಸಣ್ಣ ಹೆಜ್ಜೆಗಳಾದರೂ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ.

ಪರಿಸರವನ್ನು ಉಳಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನದ್ದಾಗಿದೆ. ನಾವು ಇಂದು ತೆಗೆದುಕೊಳ್ಳುವ ಜವಾಬ್ದಾರಿಯುತ ನಿರ್ಧಾರಗಳು ನಾಳೆಯ ಭೂಮಿಯನ್ನು ಉಳಿಸಬಹುದು. ಹಸಿರು ಉಳಿದರೆ ಜೀವನ ಉಳಿಯುತ್ತದೆ. ಇಲ್ಲವಾದರೆ ಭವಿಷ್ಯ ಕತ್ತಲೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share