ಪ್ರತಿಯೊಂದು ಪ್ರಯಾಣಕ್ಕೂ ತನ್ನದೇ ಆದ ಕಥೆ ಇರುತ್ತದೆ. ಆದರೆ ಕೆಲವೊಮ್ಮೆ ಆ ಪ್ರಯಾಣದಲ್ಲಿ ಎದುರಾಗುವ ವ್ಯಕ್ತಿಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ನಾನು ದಿನನಿತ್ಯ ಪ್ರಯಾಣಿಸುವ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುವ ಒಬ್ಬ ಅಪರೂಪದ ವ್ಯಕ್ತಿಯ ಜೀವನವನ್ನು ಅರಿತಾಗ, ಅವರ ಹೋರಾಟ ಮತ್ತು ಸಹನೆಯ ಬಗ್ಗೆ ನನಗೆ ಹೊಸ ಅರಿವು ಮೂಡಿತು.
ನಮ್ಮ ಊರಿನಿಂದ ಉಡುಪಿವರೆಗೆ ಸಂಚರಿಸುವ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಬಸ್ಸಿನಲ್ಲಿ ನಾನು ಅವರನ್ನು ಗಮನಿಸುತ್ತಿದ್ದೆ. ಎಷ್ಟೇ ಜನರ ಗದ್ದಲ ಇದ್ದರೂ, ಯಾವ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ ಪ್ರತಿಯೊಬ್ಬರೊಂದಿಗೆ ಗೌರವದಿಂದ ವರ್ತಿಸುವ ಅವರ ನಡತೆ ಗಮನಾರ್ಹವಾಗಿತ್ತು.
ಒಂದು ಬಸ್ಸಿನ ಪ್ರಯಾಣ ಸುರಕ್ಷಿತವಾಗಿರಲು ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ತಮ್ಮ ಜೀವನವನ್ನೇ ಅರ್ಪಿಸುತ್ತಾರೆ ಎಂಬುದು ಈ ಅನುಭವದಿಂದ ಸ್ಪಷ್ಟವಾಯಿತು.
ಆ ವ್ಯಕ್ತಿಯ ಹೆಸರು ಸಂಕೇತ ಆಚಾರ್ಯ. ಮೂಲತಃ ಮಾರಣಕಟ್ಟೆಯ ಇಡೂರು ಕುಂಜ್ಜಾಡಿ ಗ್ರಾಮದವರು. ಜೀವನದಲ್ಲಿ ಡ್ರೈವರ್ ಆಗಬೇಕು ಎಂಬ ಕನಸು ಹೊಂದಿದ್ದರೂ, ಈಗ ಕಂಡಕ್ಟರ್ ವೃತ್ತಿಯನ್ನು ಆರಿಸಿಕೊಂಡಿದ್ದಾರೆ.
10ನೇ ತರಗತಿವರೆಗೆ ಮಾತ್ರವೇ ಶಿಕ್ಷಣ ಪಡೆದ ಅವರು, ಮನೆಯ ಆರ್ಥಿಕ ಪರಿಸ್ಥಿತಿಯಿಂದ ಮುಂದಿನ ಓದನ್ನು ತ್ಯಜಿಸಿ ಉದ್ಯೋಗಕ್ಕೆ ಪ್ರವೇಶಿಸಿದರು.
ಶಿವಮೊಗ್ಗ–ಬೈಂದೂರು, ಸಾಗರ–ಬೈಂದೂರು, ಸಾಗರ–ಉಡುಪಿ, ಸಂಪೆಕಟ್ಟೆ–ಉಡುಪಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಈ ಪ್ರಯಾಣದಲ್ಲಿ ಅವರು ಎದುರಿಸುವ ಕಷ್ಟಗಳು ಅಸಾಧಾರಣ.
ಸಮಯದ ಕೊರತೆ, ಟ್ರಾಫಿಕ್ ಒತ್ತಡ, ಟಿಕೆಟ್ ಸಮಸ್ಯೆಗಳು, ಕೆಲ ಸಂದರ್ಭಗಳಲ್ಲಿ ಸ್ವಂತ ಹಣವನ್ನೇ ಕಟ್ಟಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಸಮಯಕ್ಕೆ ಊಟ ಸಿಗದೇ, ನೀರು ಕುಡಿಯಲು ಕೂಡ ಸಮಯ ಸಿಗದ ದಿನಗಳು ಅವರ ಜೀವನದ ಭಾಗವಾಗಿವೆ.
ಕುಟುಂಬದ ಪ್ರೋತ್ಸಾಹ ಕಡಿಮೆ ಇದ್ದರೂ, ತಾಯಿಯ ಬೆಂಬಲದಿಂದ ಈ ವೃತ್ತಿಗೆ ಬಂದಿರುವುದು ಅವರ ಜೀವನದ ಮಹತ್ವದ ತಿರುವು. “ಡ್ರೈವರ್ ಆಗಬೇಕು” ಎಂಬ ಕನಸನ್ನು ಅವರು ಇನ್ನೂ ಜೀವಂತವಾಗಿಟ್ಟುಕೊಂಡಿದ್ದಾರೆ.
ಅವರ ಕೆಲಸದ ಅವಧಿಯಲ್ಲಿ ಸರಿಯಾದ ವಾಸದ ವ್ಯವಸ್ಥೆಯಿಲ್ಲದೇ ಕೆಲವೊಮ್ಮೆ ಬಸ್ಸಿನಲ್ಲೇ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಬಸ್ಸಿನಲ್ಲಿ ಯಾವುದೇ ತೊಂದರೆ ಉಂಟಾದರೆ, ಪೊಲೀಸ್ ಠಾಣೆಗೂ ತೆರಳಬೇಕಾದ ಸಂದರ್ಭಗಳು ಎದುರಾಗುತ್ತವೆ. ಆದರೂ, ಅವರು ತಮ್ಮ ಕರ್ತವ್ಯವನ್ನು ಎಂದಿಗೂ ನಿರ್ಲಕ್ಷ್ಯ ಮಾಡಿಲ್ಲ.
ನಾನು ಗಮನಿಸಿದಂತೆ, ಅವರು ಯಾವ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಪ್ರತಿಯೊಬ್ಬರೊಂದಿಗೆ ಸಹನೆಯಿಂದ ಮಾತನಾಡುವ ಗುಣವು ಅವರನ್ನು ವಿಶೇಷವಾಗಿಸುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ತಮ್ಮ ವೃತ್ತಿಯಲ್ಲಿ ತೃಪ್ತಿ ಕಂಡುಕೊಂಡಿರುವುದು ಅವರ ದೊಡ್ಡ ಸಾಧನೆ.
ಒಂದು ದಿನದ ಪ್ರಯಾಣವೇ ಅವರ ಜೀವನದ ಹಲವು ಮುಖಗಳನ್ನು ನನ್ನ ಮುಂದಿಟ್ಟಿತು. ನಾವು ಸಾಮಾನ್ಯವಾಗಿ ಗಮನಿಸದ ವ್ಯಕ್ತಿಗಳ ಹಿಂದೆ ಇಂತಹ ಅನೇಕ ಹೋರಾಟಗಳಿರುತ್ತವೆ ಎಂಬುದನ್ನು ಇದು ನೆನಪಿಸುತ್ತದೆ.
– ರಕ್ಷಿತ ಹೆಚ್. ಗೋಪಾಲ್
ಸಂಪೆಕಟ್ಟೆ.
ಎಂ.ಜಿ.ಎಂ ಕಾಲೇಜು, ಉಡುಪಿ.