ಯಲ್ಲಾಪುರ: 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಪ್ರಕಟಣೆ ನೀಡಿದ್ದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತರಕಾರಿ ಪ್ರದೇಶ ವಿಸ್ತರಣೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಹಣ್ಣು ಬೆಳೆಗಳ ವಿಸ್ತರಣೆ, ಕಾಳುಮೆಣಸು ಪುನಶ್ಚೇತನ, ತೋಟಗಾರಿಕೆ ಬೆಳೆಗಳಿಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ, ಕಳೆ ನಿಯಂತ್ರಣಕ್ಕಾಗಿ ವೀಡ್ಮ್ಯಾಟ್, ನೀರು ಸಂಗ್ರಹಣಾ ಘಟಕ ಹಾಗೂ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತರೆ ಯೋಜನೆಗಳ ವಿವರ:
ಎಸ್.ಎಂ.ಎ.ಎಂ ಯೋಜನೆಯಡಿ ತೋಟಗಾರಿಕೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೂ ಸಹಾಯಧನ ದೊರೆಯಲಿದೆ.
ಧರತಿ ಆಭಾ ಯೋಜನೆಯಡಿ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಮಾತ್ರ ಜೇನು ಪೆಟ್ಟಿಗೆ ಹಾಗೂ ಜೇನುತುಪ್ಪ ತೆಗೆಯುವ ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲಾಗುತ್ತದೆ.
ರಾಜ್ಯವಲಯ ಯೋಜನೆಯಡಿ ಜೇನುಹುಳು ಸಾಕಾಣಿಕೆ ಹಾಗೂ ಜೇನು ಪೆಟ್ಟಿಗೆ ಖರೀದಿಗೆ ನೆರವು ಲಭ್ಯವಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಘಟಕ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ.
ಎಲ್ಲ ವರ್ಗದ ರೈತರಿಗೆ ಅವಕಾಶ:
ಈ ಯೋಜನೆಗಳ ಲಾಭವನ್ನು ಎಲ್ಲಾ ವರ್ಗದ ರೈತರು (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿ) ಪಡೆಯಬಹುದಾಗಿದೆ.
ಆಸಕ್ತ ರೈತರು ಮುಂಗಡವಾಗಿ ಯಲ್ಲಾಪುರ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ಹೆಸರು ಕಾಯ್ದಿರಿಸಿಕೊಳ್ಳುವಂತೆ ಕೋರಲಾಗಿದೆ. ಪ್ರಸಕ್ತ ವರ್ಷದ ಗುರಿ ಹಂಚಿಕೆಯ ಬಳಿಕ ಕಾರ್ಯಾದೇಶ ನೀಡಲಾಗುವುದು. ಘಟಕಗಳ ಕಾಮಗಾರಿ ಪೂರ್ಣಗೊಂಡ ನಂತರ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.