Friday, July 24, 2026
Join WhatsApp Group
HomeNationalಓಟ ನಿಲ್ಲಿಸಿದ ರೈಮಂಡ್ಸ್‌

ಓಟ ನಿಲ್ಲಿಸಿದ ರೈಮಂಡ್ಸ್‌

ಅಂತಿಮ ಯಾತ್ರೆಯೊಂದಿಗೇ ವಿವಾದವೂ ಅಂತ್ಯವಾಯ್ತು!

ಒಂದು ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುವುದು ಅದಿನ್ನೆಂಥಾ ನೋವಿನ ದಾರಿ ಎಂಬುದು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಾದೀತು. ಸಾಮ್ರಾಜ್ಯವೆಂದರೆ, ರಾಜ-ಮಹಾರಾಜರ ಕಾಲದ ಆಡಳಿತ ಸಾಮ್ರಾಜ್ಯ ಎಂದಷ್ಟೇ ಭಾವಿಸಬೇಡಿ. ಅದು ಒಂದು ಉದ್ಯಮ, ಒಂದು ಉತ್ತಮ ಕೃಷಿ ಭೂಮಿ, ಒಂದು ಉತ್ತಮ ಕುಟುಂಬ, ಒಂದು ಕಂಪನಿ, ಯಶಸ್ವಿಯಾಗಿ ತಮ್ಮ ಮಕ್ಕಳನ್ನು ಬೆಳೆಸುವುದು ಇತ್ಯಾದಿ ಯಾವುದಾದರೂ ಸರಿಯೇ. ಅದೆಲ್ಲವೂ ಬೆಳೆಸುವ ವ್ಯಕ್ತಿಗೆ ಒಂದು ಸಾಮ್ರಾಜ್ಯವೇ ತಾನೆ?!

ಒಂದು ಕಾಲದಲ್ಲಿ ಸಂಪೂರ್ಣ ಭಾರತದ ಟೆಕ್ಸ್ಟೈಲ್ ಸಾಮ್ರಾಜ್ಯದ ಚಕ್ರಾಧಿಪತಿಯಂತೆ ಮೆರೆದಿದ್ದ ರೈಮಂಡ್  ಬ್ರ್ಯಾಂಡ್ ಬಗ್ಗೆ ಕೇಳದವರು ವಿರಳವೇ.

ಕನಸು ಕಾಣುವ ಪುರುಷರ ಲೀಸ್ಟಿನಲ್ಲಿ `ಹಾಕಿದ್ರೆ ಅಂಥಾ ಬಟ್ಟೆ ಹಾಕ್ಬೇಕು ಗುರೂ…’ ಎಂಬಲ್ಲಿಂದ ಹಿಡಿದು, ` ಆ ವಯ್ಯ ಅದೇನ್ ಗಮ್ಮತ್ತಿನ ಬಟ್ಟೆ ಹಾಕ್ಕೋತಾನೆ ಗೊತ್ತೇನ್ಲಾ… ಭಾರೀ ದೊಡ್ ಮನ್ಸಾ ಅವ್ನೂ….’ ಎಂಬಲ್ಲಿಯವರೆಗಿನ ಮಾತುಗಳಿದ್ದವು.

ಅದು ನಿಜವಾಗಿ ರೈಮಂಡ್ ಗತ್ತು. ಆದರೆ, ಸದ್ಯಕ್ಕೆ ಸಾಮ್ರಾಜ್ಯ ಇನ್ನೂ ಒಂದು ತಲೆಮಾರು ಕಳೆದರೂ ಎದ್ದೇಳಲಾಗದ ಸ್ಥಿತಿಯಲ್ಲಿದೆ. ಅದೊಂದು ಕಾಲಕ್ಕೆ ಅಂಬಾನಿ, ಅದಾನಿ, ಟಾಟಾ ಸಾಮ್ರಾಜ್ಯವನ್ನೂ ಮೀರಿಸುವಂತಿದ್ದ ರೈಮಂಡ್ ತನ್ನ ಓಟ ನಿಲ್ಲಿಸಿ ಶೂನ್ಯವನ್ನೇ ದಿಟ್ಟಿಸುತ್ತಿದೆ. ಪದ್ಮಭೂಷಣ ಪುರಸ್ಕೃತ ಅಧಿಪತಿ ಕೊನೆಯ ಕಾಲದಲ್ಲಿ ಎಲ್ಲವನ್ನೂ ತೊರೆದು ಬಾಡಿಗೆ ಮನೆಯಲ್ಲಿ ದಿನ ಕಳೆದು, ಇತ್ತೀಚೆಗೆ ಬಾರದ ಲೋಕಕ್ಕೆ ತೆರಳಿದ್ದಾರೆ.

ವಿಜಯ್‌ಪತ್ ಸಿಂಘಾನಿಯ ಭಾರತೀಯ ವಸ್ತ್ರೋದ್ಯಮದ ಹೆಸರಾಂತ ವ್ಯಕ್ತಿ. ರೈಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷರೂ ಹೌದು. ಭಾರತದಲ್ಲಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಅವರು, ಉತ್ತಮ ಬಟ್ಟೆಗಳಿಗೆ ಸಂಬಂಧಿಸಿ ಲಕ್ಷಾಂತರ ಭಾರತೀಯರ ಬ್ರ್ಯಾಂಡ್ ಸ್ಥಾಪಕರಾಗಿ ಗುರುತಿಸಲ್ಪಟ್ಟವರು.

ಆದರೆ, ಅವರ ಜೀವನದ ಅದೊಂದು ಘಳಿಗೆಯಲ್ಲಿ ಎದುರಾದ ತಿರುವು, ಅವರನ್ನು ಮುಂಬೈನ ದಕ್ಷಿಣ ಭಾಗದ ಒಂದು ಬಾಡಿಗೆ ಮನೆಯಲ್ಲಿ ವಾಸಿಸುವ ಸ್ಥಿತಿಗೆ ತಂದು ತಲುಪಿಸಿಬಿಟ್ಟಿತ್ತು.

ಕಾರಣವೇನು ಗೊತ್ತೇ, ಅಪ್ಪ-ಮಕ್ಕಳ ಜಗಳ! ಇದಕ್ಕೆ ಕಾರಣವಾಗಿದ್ದು ಅವರ ಪುತ್ರ ಗೌತಮ್ ಸಿಂಘಾನಿಯಾರೊಂದಿಗೆ ತಲೆದೋರಿದ್ದ ಆಸ್ತಿ ವಿವಾದ. ಈಗಿನ ರೈಮಂಡ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಅವರೊಂದಿಗೆ ಹದಗೆಟ್ಟ ಸಂಬಂಧದಿಂದ, ಭಾರತೀಯ ವಸ್ತ್ರೋದ್ಯಮದ ಅಧಿಪತಿ ವಿಜಯ್‌ಪತ್ ಬದುಕು ನರಕದಂತಾಗಿಬಿಟ್ಟಿತ್ತು.

ವಿಮಾನಯಾನ, ಸಾಹಸ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ `ದಿ ಕಂಪ್ಲೀಟ್ ಮ್ಯಾನ್ʼ ಹಾಗೂ ಅವರ ಮಗನೊಂದಿಗಿನ ಬಿರುಕು ಅವರ ಯಶಸ್ವಿ ಹಿರಿಮೆಯನ್ನು ಮಸುಕಾಗಿಸಿಬಿಟ್ಟಿತ್ತು.

1925ರಲ್ಲಿ ಸ್ಥಾಪನೆಯಾದ ರೈಮಂಡ್ ಲಿಮಿಟೆಡ್, ಸಣ್ಣ ಉಣ್ಣೆ ಗಿರಣಿಯಿಂದ ವಿಶ್ವದ ಅತಿದೊಡ್ಡ ಸಂಯೋಜಿತ ಬಟ್ಟೆ ತಯಾರಕರಲ್ಲಿ ಒಬ್ಬರಾಗಿ ಬೆಳೆಯಿತು. ಜವಳಿ ಉದ್ಯಮದಲ್ಲಿ ಪ್ರಬಲ ಹೆಜ್ಜೆಯೂರಿ ಗುಣಮಟ್ಟ ಮತ್ತು ನಾವೀನ್ಯತೆಗೆ ಸಮಾನಾರ್ಥಕ ಹೆಸರನ್ನೂ ಪಡೆಯಿತು.

ಆಲ್ಬರ್ಟ್ ರೈಮಂಡ್ ಮತ್ತು ಅಬ್ರಹಾಂ ಜಾಕೋಬ್ ರೈಮಂಡ್ ಸ್ಥಾಪಿಸಿದ ರೇಮಂಡ್ ವೂಲೆನ್ ಮಿಲ್ಸ್ ಮುಂಬೈನ ಥಾಣೆ ಕ್ರೀಕ್ ಬಳಿ ಪ್ರಾರಂಭವಾಯಿತು. ಈ ಕಂಪನಿಯನ್ನು 1944ರಲ್ಲಿ ಲಾಲಾ ಕೈಲಾಶ್ಪತ್ ಸಿಂಘಾನಿಯಾ ಸ್ವಾಧೀನಪಡಿಸಿಕೊಂಡಾಗಿನಿಂದಲೂ ಅವರ ನಾಯಕತ್ವದಲ್ಲಿ, ರೈಮಂಡ್ ತನ್ನ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಿತು ಮತ್ತು ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿತು.

ರೇಮಂಡ್  ಬ್ರ್ಯಾಂಡ್ ಸ್ಥಾಪನೆಗೆ ಸ್ಫೂರ್ತಿದಾಯಕ ಶಕ್ತಿ ಎಂದರೆ ವಿಜಯ್‌ಪತ್. ಅವರು ಭಾರತದಲ್ಲಿ ಲಕ್ಷಾಂತರ ಜನರಿಗೆ ಉಡುಪು ಹಾಗೂ ಕಾಟನ್ ಉತ್ಪನ್ನಗಳನ್ನು ಒದಗಿಸುವ `ರೈಮಂಡ್ʼ ಕಂಪನಿಯನ್ನು ಯಶಸ್ವಿಯಾಗಿ ಬೆಳೆಸಿದವರು.

ಅವರ ಪುತ್ರ ಗೌತಮ್ ಕೂಡ ಈ ಉದ್ಯಮವನ್ನು ಅಷ್ಟೇ ಸಮರ್ಥವಾಗಿ ಮುನ್ನಡೆಸಿದರು. ವಿಜಯ್‌ಪತ್ ಅವರ ಹಿರಿಯ ಪುತ್ರ ಮಾಧುಪತಿ, ಕುಟುಂಬದಿಂದ ದೂರ ಸರಿದು, ತಮ್ಮ ಕುಟುಂಬದೊಂದಿಗೆ ಸಿಂಗಪುರಕ್ಕೆ ಸ್ಥಳಾಂತರಗೊಂಡರು.

ಮಾಧುಪತಿ ಎದುರಿಸಿದ ಎನ್ನಲಾದ ತಿರಸ್ಕಾರ ಈ ಕುಟುಂಬ ಬಾಂಧವ್ಯವನ್ನು ಮತ್ತಷ್ಟು ಹದಗೆಡಿಸಿತು. 2015ರಲ್ಲಿ ತಮ್ಮ ಕಂಪನಿಯ ಷೇರು ಹಕ್ಕುಗಳನ್ನು ತಮ್ಮ ಮಗ ಗೌತಮ್ ಅವರಿಗೆ ಹಸ್ತಾಂತರಿಸಿದ ನಂತರ, ಆತ್ಮೀಯ ಸಂಬಂಧಗಳು ಹಳ್ಳ ಹಿಡಿದಿದ್ದವು.

ಹೀಗಿದ್ದ ತಂದೆ-ಮಗ ಎಂಬ ಅತ್ಮೀಯ, ಅವರ್ಣನೀಯ ಸಂಬಂಧ ಕಹಿ ವಿವಾದಕ್ಕೆ ತುತ್ತಾಗಿಬಿಟ್ಟಿತು. 2015ರಲ್ಲಿ ವಿಜಯ್‌ಪತ್ ಅವರು ಜೆ.ಕೆ. ಹೌಸ್‌ನಲ್ಲಿರುವ ಫ್ಲಾಟ್‌ನ್ನು ತಮ್ಮ ನಿವಾಸವಾಗಿ ಉಪಯೋಗಿಸುವ ನಿರೀಕ್ಷೆಯೊಂದಿಗೆ ಕಂಪನಿಯ ಹಕ್ಕುಗಳನ್ನು ಗೌತಮ್ ಅವರಿಗೆ ಬಿಟ್ಟಿದ್ದರು.

ಆದರೆ, ಮಧ್ಯಸ್ಥಿಕೆಯ ತೀರ್ಪು ಪಾಲನೆಯಾಗದ ಕಾರಣದಿಂದಾಗಿ ಆ ಫ್ಲಾಟ್ ಅವರ ಪಾಲಾಗಲಿಲ್ಲ.

ಇದೇ ಕಾರಣಕ್ಕೆ ರೇಮಂಡ್ ಕಂಪನಿಯು ವಿಜಯ್‌ಪತ್ ಅವರ `ಚೇರ್‌ಪರ್ಸನ್ ಎಮೆರಿಟಸ್’ ಪದವಿಯನ್ನು ತೆಗೆದು ಹಾಕಿದ್ದು ದೊಡ್ಡ ಆಘಾತವನ್ನುಂಟುಮಾಡಿತು. ಈ ವಿವಾದ ಕೊನೆಗೊಳ್ಳಲೇ ಇಲ್ಲ.

2020ರ ಡಿಸೆಂಬರ್‌ನಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ವಿಜಯ್‌ಪತ್ ಅವರು ತಮ್ಮ ಪುತ್ರನ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕ್ರಿಯೆಯಲ್ಲಿ ತಮ್ಮ ಹೋರಾಟವನ್ನು ವಿವರಿಸಿದ್ದರು.

ವಿಜಯಪತ್ ಸಿಂಘಾನಿಯಾ ಅವರ ನಿಧನದೊಂದಿಗೆ ಒಂದು ಯುಗ ಅಂತ್ಯಗೊಂಡಿದೆ. ಜೊತೆಗೆ ವರ್ಷಗಳಿಂದ ಚರ್ಚೆಯಾಗುತ್ತಿದ್ದ ಕುಟುಂಬ ವಿವಾದಕ್ಕೂ ಒಂದು ಮೌನ ವಿರಾಮ ಸಿಕ್ಕಂತಾಗಿದೆ. ಆದರೆ ಅವರು ಕಟ್ಟಿದ ಬ್ರ್ಯಾಂಡ್, ಅವರ ದೃಷ್ಟಿ ಮತ್ತು ಭಾರತೀಯ ಉದ್ಯಮ ಲೋಕದಲ್ಲಿ ಬಿಟ್ಟ ಗುರುತು ಇನ್ನೂ ಉಳಿದೇ ಇದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share