ಮೈಸೂರು :ಅಖಿಲ ಭಾರತ ಸರ್ಕಾರಿ ಐಟಿಐಗಳ ನೌಕರರ ಸಂಘ (ರಿ.) (ಎನ್ಎಫ್ಜಿಐಟಿಐಇಎ) ವತಿಯಿಂದ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ಅವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಆಯ್ಕೆ ಕರ್ನಾಟಕ ರಾಜ್ಯದ ಐಟಿಐ ನೌಕರರ ಸಂಘ ಹಾಗೂ ನೌಕರರಿಗೆ ಸಂತಸದ ವಿಚಾರವಾಗಿದ್ದು, ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ತಾಲೂಕು ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನೌಕರರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸೋಮಶೇಖರ್ ಅವರ ಕಾರ್ಯವನ್ನು ಮನಗಂಡು ಈ ಗೌರವ ನೀಡಲಾಗಿದೆ.
ಇದಕ್ಕೂ ಮೊದಲು ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಸರಿ ಅವರು ಸೋಮಶೇಖರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿ ಜವಾಬ್ದಾರಿ ನೀಡಿದ್ದರು. ಆ ಹುದ್ದೆಯಲ್ಲಿಯೂ ಅವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಂಜಾಬ್-ಚಂಡಿಗಢದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಇವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ತಾಲೂಕು ಹಾಗೂ ರಾಜ್ಯದ ನೌಕರರಿಗೆ ದೊರೆತ ಗೌರವ ಸಂಕೇತವಾಗಿದೆ. ಇದರಿಂದ ಇಲಾಖೆಯ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಮನ್ವಯ ಸಾಧಿಸಲು ಮತ್ತಷ್ಟು ಸಹಕಾರಿ ಆಗಲಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.