Friday, July 24, 2026
Join WhatsApp Group
HomeAgricultureಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಬಗ್ಗೆ ರೈತರಿಗೆ ಸಲಹೆ

ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಬಗ್ಗೆ ರೈತರಿಗೆ ಸಲಹೆ

ಕಾರವಾರ: ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಉತ್ಪಾದನೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಜಾನುವಾರುಗಳನ್ನು ಮುಂಜಾನೆ ಹಾಗೂ ಸಾಯಂಕಾಲದ ತಂಪಾದ ಸಮಯದಲ್ಲಿ ಮೇಯಲು ಬಿಡಬೇಕು. ದಿನಕ್ಕೆ 2 ರಿಂದ 3 ಬಾರಿ ಶುದ್ಧವಾದ ನೀರನ್ನು ಕುಡಿಸಬೇಕು. ಮಧ್ಯಾಹ್ನದ ವೇಳೆಯಲ್ಲಿ ಕೊಟ್ಟಿಗೆಯಲ್ಲಿ ಅಥವಾ ಮರಗಳ ನೆರಳಿನಲ್ಲಿ ಕಟ್ಟಿ ಇರಿಸಬೇಕು. ದಿನಕ್ಕೆ 1 ರಿಂದ 2 ಬಾರಿ ಮೈ ತೊಳೆಯಬೇಕು. ಮಿಶ್ರ ತಳಿ ಹಸು ಹಾಗೂ ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಲು ನೀರಿನಲ್ಲಿ ತೋಯಿಸಿದ ಗೋಣಿಚೀಲವನ್ನು ಮೈ ಮೇಲೆ ಹಾಕುವುದು ಒಳಿತು.

ಕೊಟ್ಟಿಗೆಯನ್ನು ತಂಪಾಗಿಡಲು ಮೇಲ್ಛಾವಣಿಗೆ ತೆಂಗಿನ ಗರಿ ಅಥವಾ ಹುಲ್ಲು ಹಾಸಬೇಕು. ಕಿಟಕಿಗಳಿಗೆ ಗೋಣಿಚೀಲ ಕಟ್ಟಿ ನೀರನ್ನು ಸಿಂಪಡಿಸಬೇಕು. ಜಮೀನು ಉಳುಮೆಗೆ ಬಳಸುವ ಎತ್ತುಗಳನ್ನು ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ಮಾತ್ರ ಕೆಲಸಕ್ಕೆ ಬಳಸಬೇಕು. ಕುರಿ ಹಾಗೂ ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ, ಮಧ್ಯಾಹ್ನ ನೆರಳಿನಲ್ಲಿ ವಿಶ್ರಾಂತಿ ನೀಡಬೇಕು. ಕರುಗಳು ಹಾಗೂ ಮರಿ ಕುರಿ-ಮೇಕೆಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲು ಹಾಗೂ ನೀರು ನೀಡಬೇಕು.

ಹೈನುಗಾರಿಕೆ ಜಾನುವಾರುಗಳಿಗೆ ಪೌಷ್ಟಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವು ನೀಡಬೇಕು. ಕುಡಿಯುವ ನೀರು ಅಥವಾ ಆಹಾರದಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಬಹುದು. ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಹಾಕಿಸಬೇಕು. ವರ್ಷಕ್ಕೆ 2 ರಿಂದ 3 ಬಾರಿ ಜಂತುನಾಶಕ ಔಷಧಿ ನೀಡಬೇಕು. ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶುವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಬೇಕು.

ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ರಿಂದ 4 ಬಾರಿ ಕುಡಿಸಬಹುದು. ಕೊಟ್ಟಿಗೆಯ ಸುತ್ತಮುತ್ತ ಹಾಗೂ ತೋಟ-ಹೊಲದ ಬದುವುಗಳಲ್ಲಿ ಮೇವಿನ ಮರಗಳನ್ನು ಬೆಳೆಸಿದರೆ ತಂಪಾದ ನೆರಳು ಮತ್ತು ಹಸಿರು ಮೇವು ದೊರೆಯುತ್ತದೆ. ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಸುಟ್ಟುಹಾಕದೆ ಬಣವೆ ಹಾಕಿ ಅಥವಾ ಸುರುಳಿ ಸುತ್ತಿಟ್ಟು ಸಂಗ್ರಹಿಸಬೇಕು. ಇದರಿಂದ ಮೇವಿನ ಕೊರತೆ ನಿವಾರಣೆಯಾಗುತ್ತದೆ.

ಬೇಸಿಗೆಯಲ್ಲಿ ಆಕಾಲಿಕ ಮುಂಗಾರು ಮಳೆ ಹಾಗೂ ಸಿಡಿಲಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ರೈತರು ಜಾನುವಾರುಗಳನ್ನು ಮರಗಳ ಕೆಳಗೆ ನಿಲ್ಲಿಸಬಾರದು. ಎತ್ತರ ಪ್ರದೇಶಗಳಲ್ಲಿ ಮೇಯಿಸುತ್ತಿದ್ದರೆ ತಕ್ಷಣ ತಗ್ಗು ಪ್ರದೇಶಕ್ಕೆ ಸ್ಥಳಾಂತರಿಸಬೇಕು. ತಂತಿ ಬೇಲಿ, ವಿದ್ಯುತ್ ಕಂಬ, ಮೊಬೈಲ್ ಟವರ್ ಹಾಗೂ ಇತರೆ ವಿದ್ಯುತ್ ಉಪಕರಣಗಳ ಹತ್ತಿರ ಇರಿಸಬಾರದು.

ನೈಸರ್ಗಿಕ ವಿಕೋಪದಿಂದ ಜಾನುವಾರುಗಳು ಮೃತಪಟ್ಟಲ್ಲಿ ತಕ್ಷಣ ಕಂದಾಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share