ಕಾರವಾರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರದಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಈ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಪ್ರತಿ ವರ್ಷವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಪೂರ್ಣಗೊಳಿಸಲು ಬಯೋಮೆಟ್ರಿಕ್ ಆಧಾರಿತ ಹಾಗೂ ಮುಖ ಗುರುತಿಸುವಿಕೆ ಆಧಾರಿತ ಎಂಬ ಎರಡು ವಿಧಾನಗಳಿವೆ.
ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿಯನ್ನು ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಅಥವಾ ವಿಎನ್‌ಓ ಆ್ಯಪ್ ಮೂಲಕ ಮಾಡಿಸಿಕೊಳ್ಳಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಟ್ಟು 1,48,960 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದ್ದು, ಅಂಕೋಲಾದಲ್ಲಿ 15,532, ಭಟ್ಕಳದಲ್ಲಿ 16,817, ದಾಂಡೇಲಿಯಲ್ಲಿ 519, ಹಳಿಯಾಳದಲ್ಲಿ 12,684, ಹೊನ್ನಾವರದಲ್ಲಿ 21,901, ಕಾರವಾರದಲ್ಲಿ 9,864, ಕುಮಟಾದಲ್ಲಿ 21,722, ಮುಂಡಗೋಡದಲ್ಲಿ 8,167, ಸಿದ್ದಾಪುರದಲ್ಲಿ 13,749, ಶಿರಸಿಯಲ್ಲಿ 16,810, ಜೋಯಿಡಾದಲ್ಲಿ 4,443 ಹಾಗೂ ಯಲ್ಲಾಪುರದಲ್ಲಿ 6,752 ರೈತರ ಇ-ಕೆವೈಸಿ ಬಾಕಿ ಇದೆ.
ಹೀಗಾಗಿ ಇ-ಕೆವೈಸಿ ಬಾಕಿ ಇರುವ ರೈತರು ಬಯೋಮೆಟ್ರಿಕ್ ಆಧಾರಿತ ಅಥವಾ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮೂಲಕ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇ-ಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವ ಮುಂದಿನ ಕಂತಿನ ಸಹಾಯಧನ ಸ್ಥಗಿತಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.