ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯತ್ತ ರೈತರ ಆಸಕ್ತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದರೂ, ಇದೇ ಪ್ರವೃತ್ತಿಯನ್ನು ಕೆಲ ಹಣಧಾಹಿಗಳು ಮತ್ತು ಉದ್ಯಮಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ.
ರಾಸಾಯನಿಕ ಗೊಬ್ಬರಗಳ ಹಾನಿಯಿಂದ ದೂರವಿರಲು ಪ್ರಯತ್ನಿಸುತ್ತಿರುವ ರೈತರು ಸಾವಯವ ಗೊಬ್ಬರಗಳತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲೇ, ಮಾರುಕಟ್ಟೆಯಲ್ಲಿ ನಕಲಿ ಅಥವಾ ಅಸಂಪೂರ್ಣವಾಗಿ ತಯಾರಿಸಲಾದ ಉತ್ಪನ್ನಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಸಕ್ಕರೆ ಕಾರ್ಖಾನೆಗಳ ಪ್ರೆಸ್‌ಮಡ್, ಬಯೋವೇಸ್ಟ್ ಹಾಗೂ ಇತರೆ ಕೈಗಾರಿಕಾ ಅವಶೇಷಗಳಿಗೆ ಕೆಲವು ಸಪ್ಲಿಮೆಂಟ್‌ಗಳನ್ನು ಸೇರಿಸಿ, ಅದನ್ನೇ “ಸಾವಯವ ಗೊಬ್ಬರ” ಎಂದು ಹೆಸರಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ, ಕೆಲವು ಕಂಪನಿಗಳು ಚೈನ್‌ಲಿಂಕ್ ಮಾದರಿಯ ಮಾರಾಟ ತಂತ್ರಗಳು, ಆಕರ್ಷಕ ಆಫರ್‌ಗಳು ಹಾಗೂ ಹೆಚ್ಚುವರಿ ಲಾಭದ ಭರವಸೆಗಳನ್ನು ನೀಡುವ ಮೂಲಕ ರೈತರನ್ನು ಸೆಳೆಯುತ್ತಿವೆ. ಆದರೆ ಇವು ಬಹುತೇಕ ಆಮಿಷಗಳಾಗಿದ್ದು, ಅದರ ನೈಜ ಪರಿಣಾಮ ತಕ್ಷಣವೇ ಗೋಚರಿಸುವುದಿಲ್ಲ.
ಇಂತಹ ಗೊಬ್ಬರಗಳನ್ನು ಬಳಸುವಾಗ ಆರಂಭದಲ್ಲಿ ಯಾವುದೇ ದೊಡ್ಡ ಹಾನಿ ಕಾಣಿಸದಿರುವುದರಿಂದ ರೈತರು ಅದರ ಗುಣಮಟ್ಟದ ಬಗ್ಗೆ ಅನುಮಾನ ಪಡುವುದಿಲ್ಲ. ಆದರೆ ವರ್ಷಗಳ ಕಾಲ ಬಳಸಿದ ನಂತರ ಮಣ್ಣಿನ ಜೀವಾಣು ಸಮತೋಲನ ಹಾಳಾಗುವುದು, ಫಲವತ್ತತೆ ಕುಸಿಯುವುದು ಮತ್ತು ಉತ್ಪಾದನೆ ನಿಧಾನವಾಗಿ ಕಡಿಮೆಯಾಗುವುದು ಎಂಬ ಪರಿಣಾಮಗಳು ಸ್ಪಷ್ಟವಾಗುತ್ತವೆ.
ಹತ್ತಾರು ವರ್ಷಗಳ ಬಳಿಕವೇ ಭೂಮಿಯ ನಿಜವಾದ ಹಾನಿ ಗೊತ್ತಾಗುತ್ತದೆ. ಆಗಾಗಲೇ ಬಹುಮುಖ್ಯವಾದ ಸಮಯ ಕಳೆದುಹೋಗಿದ್ದು, ಮಣ್ಣಿನ ಮೂಲ ಸ್ವರೂಪವನ್ನು ಮರಳಿ ಪಡೆಯುವುದು ಕಷ್ಟವಾಗುತ್ತದೆ. ಈ ನಡುವೆ ರೈತರು ಹಣ ನಷ್ಟಪಡುವುದಷ್ಟೇ ಅಲ್ಲದೆ, ತಮ್ಮ ಜಮೀನಿನ ದೀರ್ಘಕಾಲಿಕ ಆರೋಗ್ಯವನ್ನೂ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಾರೆ.
ಸಾವಯವ ಗೊಬ್ಬರವೆಂದರೆ ಕೇವಲ ಕಸದ ಸಂಗ್ರಹವಲ್ಲ. ಅದು ನಿಯಮಿತ ವಿಧಾನದಲ್ಲಿ ಸಂಸ್ಕರಿಸಲ್ಪಟ್ಟ, ಜೈವಿಕ ಅಂಶಗಳಿಂದ ಸಮೃದ್ಧವಾದ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಗುಣಮಟ್ಟದ ಉತ್ಪನ್ನವಾಗಿರಬೇಕು. ಆದರೆ ನಿಯಂತ್ರಣದ ಕೊರತೆ ಹಾಗೂ ಸಮರ್ಪಕ ಮೇಲ್ವಿಚಾರಣೆ ಇಲ್ಲದ ಕಾರಣ ಅನೇಕ ಉತ್ಪನ್ನಗಳು ಯಾವುದೇ ಪ್ರಮಾಣಪತ್ರಗಳಿಲ್ಲದೆ ಮಾರುಕಟ್ಟೆಗೆ ಬರುತ್ತಿವೆ.
ಈ ಹಿನ್ನೆಲೆ ರೈತರು ಗೊಬ್ಬರ ಖರೀದಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಉತ್ಪನ್ನಗಳನ್ನೇ ಬಳಸುವುದು, ಕೃಷಿ ಇಲಾಖೆಯ ಸಲಹೆ ಪಡೆಯುವುದು ಮತ್ತು ಹೊಸ ಉತ್ಪನ್ನಗಳನ್ನು ಮೊದಲು ಸಣ್ಣ ಪ್ರಮಾಣದಲ್ಲಿ ಪರೀಕ್ಷಿಸುವುದು ಅಗತ್ಯವಾಗಿದೆ.
ಮತ್ತೊಂದೆಡೆ, ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ನಕಲಿ ಸಾವಯವ ಗೊಬ್ಬರಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು, ಗುಣಮಟ್ಟ ಪರಿಶೀಲನೆ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ರೈತರಿಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.