Thursday, July 23, 2026
Join WhatsApp Group
HomeAgricultureರೈತರ ಪ್ರತಿಭೆಗೆ ಸರ್ಕಾರದ ಮನ್ನಣೆ: ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ರೈತರ ಪ್ರತಿಭೆಗೆ ಸರ್ಕಾರದ ಮನ್ನಣೆ: ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರವಾರ: ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಬೆಳೆ ಸ್ಪರ್ಧೆ ಯೋಜನೆಯ ಕೃಷಿ ಪ್ರಶಸ್ತಿ ಹಾಗೂ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಆಗಸ್ಟ್‌ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭತ್ತದಲ್ಲಿ ಅಧಿಕ ಇಳುವರಿ ಪಡೆದ ರೈತರಿಗೆ ಅವಕಾಶ

ಬೆಳೆ ಸ್ಪರ್ಧೆ ಯೋಜನೆಯಡಿ ಭತ್ತದ ಬೆಳೆಯಲ್ಲಿ ಅಧಿಕ ಇಳುವರಿ ಪಡೆದ ರೈತರು ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸ್ವತಃ ಕೃಷಿಯಲ್ಲಿ ತೊಡಗಿರುವ ಕ್ರಿಯಾಶೀಲ ರೈತರಾಗಿರಬೇಕು. ಸ್ವಂತ ಜಮೀನು ಇಲ್ಲದಿದ್ದರೂ, ಭೂ ಸುಧಾರಣಾ ಕಾಯ್ದೆಯ ನಿಯಮಗಳಿಗೆ ಒಳಪಟ್ಟು ಬೇಸಾಯ ಮಾಡುತ್ತಿರುವ ರೈತರು ಸಹ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಹಿಳಾ ರೈತರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಗೆ ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಅರ್ಜಿ ಆಹ್ವಾನ

ಆತ್ಮ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಅರ್ಜಿ ಆಹ್ವಾನಿಸಲಾಗಿದೆ. ನೂತನ ತಂತ್ರಜ್ಞಾನ ಅಳವಡಿಕೆ, ಸಮಗ್ರ ಬೆಳೆ ಪದ್ಧತಿ, ನೀರು ನಿರ್ವಹಣೆ, ಸಾವಯವ ಕೃಷಿ, ಯಾಂತ್ರೀಕರಣ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಹಸಿರುಮನೆ, ಸಸ್ಯಕಾಶಿ, ಕೃಷಿ ಸಂಸ್ಕರಣೆ ಹಾಗೂ ಅರಣ್ಯ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ರೈತರು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾಗುವ ಐವರು ರೈತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಇದೇ ಮಾದರಿಯ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ರೈತರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಪಹಣಿ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ
  • ಇತ್ತೀಚಿನ ಭಾವಚಿತ್ರ (ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಎರಡು ಭಾವಚಿತ್ರ)
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಾದರೆ ಜಾತಿ ಪ್ರಮಾಣ ಪತ್ರ
  • ಬೆಳೆ ಸ್ಪರ್ಧೆಗೆ ಸಂಬಂಧಿಸಿದ ಕ್ಷೇತ್ರದ ಛಾಯಾಚಿತ್ರಗಳು

ಆಸಕ್ತ ರೈತರು ಆಗಸ್ಟ್‌ 31ರೊಳಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಆತ್ಮ ಯೋಜನೆ ಸಿಬ್ಬಂದಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share