ಶಿರಸಿ: ಪ್ರಾಧ್ಯಾಪಕ, ಕವಿ, ಅನುವಾದಕ, ನಟ, ನಿರ್ದೇಶಕ, ಸಂಘಟಕ ಹೀಗೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಕ್ರಿಯ ಧನಾತ್ಮಕ ಚಿಂತನೆಯ ಪ್ರೊಫೆಸರ್ ಮೋಹನ ಹಬ್ಬು ಅವರ 50 ಕಥೆಗಳಲ್ಲಿ ಆಯ್ದ 21 ಕಥೆಗಳ ಸಂಕಲನ ʻಸಂಚಯʼ ಅತ್ಯಮೂಲ್ಯವಾದ ಕೃತಿ ಎಂದು ಡಾ. ಅಜಿತ್ ಹರೀಶಿ ಅಭಿಪ್ರಾಯಪಟ್ಟರು.
ಅವರು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ.ಎನ್. ಸಭಾಹಿತ , ಜಸ್ಟಿಸ್ ವಿಷ್ಣು ಸಭಾಹಿತ್ ಸ್ಮರಣೆಯಲ್ಲಿ ಆಯೋಜಿಸಿದ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾಹಿತಿ, ಅಂಕಣಕಾರ ಧೀರೇಂದ್ರ ನಾಗರಹಳ್ಳಿ ಅವರ ʻಇರವಂತʼ ನಾಟಕವನ್ನು ಪ್ರೊ. ರಾಮಕೃಷ್ಣ ಗುಂದಿ ಅವಲೋಕನ ಮಾಡುತ್ತಾ, ಧರ್ಮ, ಧರ್ಮದ ಅನುಷ್ಠಾನ, ಕ್ಷತ್ರಿಯ, ಪರಾಕ್ರಮ, ಯುದ್ಧ, ರಾಜನಾದವನ ಕರ್ತವ್ಯ ಮುಂತಾದ ಮಹತ್ವವುಳ್ಳ ವಿಷಯದ ಕುರಿತು ಪ್ರೌಢವಾದ ಮಾಹಿತಿಗಳನ್ನು ಸಂಭಾಷಣೆಯ ಮೂಲಕ ತಿಳಿಸಿ ಕೊಡುವ ಅತ್ಯುತ್ತಮ ವೈಚಾರಿಕ ನಾಟಕ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರೊ. ಕೆ.ಎನ್. ಹೊಸಮನಿ ಮಾತನಾಡುತ್ತಾ, ಆಳವಾದ ಅಧ್ಯಯನ, ಜೀವನಾನುಭವ ಇಲ್ಲದೆ ಸುಪುಷ್ಟವಾದ ಸಾಹಿತ್ಯ ಬರಲಾರದು. ಸತ್ಯಯುತ ಸಾಹಿತ್ಯಕ್ಕೆ ಭಾವಶಕ್ತಿ, ಭಾಷಾ ಶಕ್ತಿ ಅತ್ಯವಶ್ಯ. ಇತ್ತೀಚೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಭಿನ್ನತೆಗಳೆಲ್ಲ ಕಣ್ಮರೆಯಾಗಿ, ಸಾಹಿತ್ಯದಲ್ಲಿ ವೈವಿಧ್ಯತೆ, ವಿಭಿನ್ನತೆ ಕಾಣುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ ಹೆಗಡೆ ಹಾಗೂ ರೇಣುಕಾ ಭಟ್ಟ ಪ್ರೊ. ಮೋಹನ ಹಬ್ಬು ಅವರ ಕವನಗಳನ್ನು ಹಾಡಿದರು. ಲೇಖಕಿ, ಅಂಕಣಗಾರ್ತಿ ಭವ್ಯಾ ಹಳೆಯೂರ ಸ್ವಾಗತಿಸಿ, ಗಣ್ಯರನ್ನು ಪರಿಚಯಿಸಿದರು.
ಸಾಹಿತಿ ಜಯಪ್ರಕಾಶ ಹಬ್ಬು ಕಾರ್ಯಕ್ರಮವನ್ನು ಸಂಯೋಜಿಸಿ, ನಾಟಕ, ಕವಿತೆ, ಅನುವಾದ, ನಾಟಕ ನಿರ್ದೇಶನ, ನಟನೆ, ಸಂಘಟನೆ ಇವುಗಳಲ್ಲಿ ಬದುಕಿನ ಬಹುಭಾಗ ಕಳೆದಿರುವ ಪ್ರೊ. ಮೋಹನ ಹಬ್ಬು ಅವರು ಕಾರ್ಯಕ್ರಮಕ್ಕೆ ಅನಿವಾರ್ಯವಾಗಿ ಆಗಮಿಸದಿರುವುದನ್ನು ತಿಳಿಸಿ ಅವರ ಸಂದೇಶವನ್ನು ಓದಿ, ಕಾರ್ಯಕ್ರಮವನ್ನು ನಿರ್ವಹಿಸಿದರು.
ಅಂಕಣಕಾರ, ಸಾಹಿತಿ ಧೀರೇಂದ್ರ ನಾಗರಹಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು ಗೌರವಿಸಲಾಯಿತು. ಮುಖ್ಯಸ್ಥ ಎಂ.ಎಸ್. ಹೆಗಡೆ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ, ಅಂಕಣಕಾರರಾದ ವಾಸುದೇವ ಶಾನಭಾಗ, ಡಾ. ಜಿ.ಎ. ಹೆಗಡೆ, ವರ್ಗಾಸರ ಗಣಪತಿ ಭಟ್, ಉಮೇಶ್ ನಾಯ್ಕ್, ಸುಧಾ ಭಟ್, ಆಶಾ ಸಭಾಹಿತ, ಇಂದಿರಾ ಬೈಲಕೇರಿ, ಲಕ್ಷ್ಮಣ ಶಾನಭಾಗ, ದೇವೇಂದ್ರಪ್ಪ, ಶಂಕರ ಹೆಗಡೆ ಭದ್ರನ್, ಎಸ್.ಎಸ್. ಹೆಗಡೆ, ಡಿ.ಎಸ್. ಹೆಗಡೆ, ಡಿ.ಜಿ. ಹೆಗಡೆ, ರಾಮಚಂದ್ರ ಬೈಲಕೇರಿ, ಪ್ರಭಾತ ಹೆಗಡೆ, ಆರ್.ಎಸ್. ಹೆಗಡೆ, ಡಿ.ಟಿ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.