Friday, July 24, 2026
Join WhatsApp Group
HomeCrimeವ್ಯವಹಾರದ ಮನಸ್ತಾಪ ಕೊ*ಲೆಯಲ್ಲಿ ಅಂತ್ಯ

ವ್ಯವಹಾರದ ಮನಸ್ತಾಪ ಕೊ*ಲೆಯಲ್ಲಿ ಅಂತ್ಯ

ಮುಂಡಗೋಡ: ಕಳೆದ ಶುಕ್ರವಾರ ರಾತ್ರಿ ಪಟ್ಟಣದ ಹೋಟೆಲ್‌ನಲ್ಲಿ ನಡೆದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಕೊ*ಲೆ ಪ್ರಕರಣವನ್ನು ಮುಂಡಗೋಡ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳನ್ನು ಮುಂಡಗೋಡ ತಾಲೂಕಿನ ಸಾಲಗಾಂವದ ಮಂಜುನಾಥ ನಾಗೇಂದ್ರ ಕಾಜಗಾರ (35), ಶ್ರೀಕಾಂತ ರಾಜಶೇಖರ ಕಿರಣ್ಣನವರ್ (22), ಧಾರವಾಡದ ಅಭಿಷೇಕ್ ಮಲ್ಲಿಕಾರ್ಜುನ ಬಡಶೆಟ್ಟಿ (22), ಮಂಜುನಾಥ್ ವಿಷ್ಣು ಬೆಳಗಾಂವ (20) ಹಾಗೂ ದೀಪಕ್ ನಾಗರಾಜ ನವಲೆ (22) ಎನ್ನಲಾಗಿದೆ.

ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳು, ಒಂದು ಕಾರು, ಎರಡು ಕಂಟ್ರಿ ಮೇಡ್ ಪಿಸ್ತೂಲ್‌ಗಳು ಹಾಗೂ 10 ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ಕಳೆದ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ನಡೆದಿತ್ತು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೋಟೆಲ್‌ಗೆ ಸ್ನೇಹಿತನೊಂದಿಗೆ ಊಟಕ್ಕೆ ತೆರಳಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಮೇಲೆ ಐವರು ಹಂತಕರ ತಂಡ ದಾಳಿ ನಡೆಸಿತ್ತು. ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ, ಬಳಿಕ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊ*ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಪೊಲೀಸ್ ತನಿಖೆಯಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆ ಮತ್ತು ಪ್ರಮುಖ ಆರೋಪಿ ಮಂಜುನಾಥ ನಾಗೇಂದ್ರ ಕಾಜಗಾರ ನಡುವೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಮಂಜುನಾಥ್ ಮತ್ತು ಜಮೀರ್ ನಡುವೆ ವ್ಯವಹಾರ ಸಂಬಂಧಿತ ವೈಮನಸ್ಸು ಹೆಚ್ಚಾಗಿತ್ತು. ಜಮೀರ್, ಮಂಜುನಾಥ್ ಜೊತೆ ಕೆಲಸ ಮಾಡುತ್ತಿದ್ದ ಕೆಲ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದರಿಂದ ಇಬ್ಬರ ನಡುವಿನ ದ್ವೇಷ ಮತ್ತಷ್ಟು ತೀವ್ರಗೊಂಡಿತ್ತು ಎನ್ನಲಾಗಿದೆ.

ಇದೇ ವೇಳೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಮೀರ್ ನೀಡುತ್ತಿದ್ದ ಕಿರುಕುಳದಿಂದ ಮಂಜುನಾಥ್ ಮುಂಡಗೋಡ ಬಿಟ್ಟು ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದ. ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಜಮೀರ್ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಿದ್ದುದರಿಂದ ಮಂಜುನಾಥ್‌ನ ಅಸಮಾಧಾನ ಮತ್ತಷ್ಟು ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಂಜುನಾಥ್ ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಿ ಜಮೀರ್ ಹತ್ಯೆ ಮಾಡಿಸಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಹತ್ಯೆಯ ಹಿಂದಿನ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share