ಅರಣ್ಯಇಲಾಖೆಯ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಚಾಟಿ
ನವದೆಹಲಿ: ಗಿಳಿಗಳಿಂದ ಬೆಳೆಗಳಿಗೆ ಹಾನಿಯಾದರೆ ಅದರ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತು ರೈತರಿಗೆ ಪರಿಹಾರ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರೈತ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಗಿಳಿಗಳು ಕೂಡ ವನ್ಯಪ್ರಾಣಿಗಳಾಗಿದ್ದು, ಅವುಗಳಿಂದ ಉಂಟಾಗುವ ನಷ್ಟಕ್ಕೂ ಸರ್ಕಾರದ ಹೊಣೆಗಾರಿಕೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗಿ ಗ್ರಾಮದ ರೈತ ಮಹದೇವ್ ಡಿಕಾಟೆ ಅವರು ತಮ್ಮ ದಾಳಿಂಬೆ ತೋಟಕ್ಕೆ ಗಿಳಿಗಳಿಂದ ಹಾನಿಯಾದ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ತೋಟದಲ್ಲಿದ್ದ ಸುಮಾರು 200 ದಾಳಿಂಬೆ ಮರಗಳು ಕಾಡು ಗಿಳಿಗಳಿಂದ ಹಾನಿಗೊಳಗಾಗಿವೆ ಎಂದು ಅವರು ದೂರಿದ್ದರು.
ಸ್ಥಳ ಪರಿಶೀಲನೆಯಲ್ಲಿ ಶೇ.50ಕ್ಕೂ ಹೆಚ್ಚು ಹಾನಿ ದೃಢಪಟ್ಟಿದ್ದರೂ, ಸರ್ಕಾರಿ ನಿರ್ಣಯಗಳಲ್ಲಿ ಗಿಳಿಗಳ ಹೆಸರಿಲ್ಲ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸಲಾಗಿತ್ತು.
ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ, ಗಿಳಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಪ್ರಾಣಿಗಳಾಗಿವೆ. ಕೇವಲ ಸರ್ಕಾರಿ ಆದೇಶದಲ್ಲಿ ಹೆಸರು ಇಲ್ಲವೆಂಬ ಕಾರಣಕ್ಕೆ ರೈತನಿಗೆ ಪರಿಹಾರ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿ, ಪ್ರತಿ ಮರಕ್ಕೆ 200 ರೂಪಾಯಿಯಂತೆ 200 ಮರಗಳಿಗೆ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಉರ್ಮಿಳಾ ಜೋಶಿ ಫಾಲ್ಕೆ ಮತ್ತು ನಿವೇದಿತಾ ಮೆಹತಾ ಅವರ ಪೀಠ ಆದೇಶ ನೀಡಿದೆ.
ನ್ಯಾಯಾಲಯ ಮತ್ತೊಂದು ಮಹತ್ವದ ಅಂಶವನ್ನೂ ಉಲ್ಲೇಖಿಸಿದೆ. ವನ್ಯಪ್ರಾಣಿಗಳಿಂದ ನಷ್ಟವಾದರೂ ಪರಿಹಾರ ಸಿಗದಿದ್ದರೆ ರೈತರು ಬೆಳೆ ಉಳಿಸಿಕೊಳ್ಳಲು ಪ್ರಾಣಿಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ವನ್ಯಜೀವಿ ಸಂರಕ್ಷಣೆಯ ಉದ್ದೇಶವೇ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈ ತೀರ್ಪು ಕರ್ನಾಟಕದ ರೈತರಿಗೆ ಕೂಡ ಮಹತ್ವದ ಸಂದೇಶ ನೀಡುತ್ತದೆ. ರಾಜ್ಯದ ಹಲವೆಡೆ ಕಾಡುಹಂದಿ, ಆನೆ, ಜಿಂಕೆ, ಕೋತಿ, ನವಿಲು, ಗಿಳಿ, ಕಾಡೆಮ್ಮೆ ಸೇರಿದಂತೆ ಹಲವು ವನ್ಯಜೀವಿಗಳ ಹಾವಳಿಯಿಂದ ರೈತರು ವರ್ಷಂಪ್ರತಿ ಭಾರೀ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.
ವಿಶೇಷವಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಚಾಮರಾಜನಗರ ಸೇರಿದಂತೆ ಅರಣ್ಯ ಅಂಚಿನ ಜಿಲ್ಲೆಗಳಲ್ಲಿ ರೈತರ ಸಂಕಷ್ಟ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಡಿಕೆ, ಬಾಳೆ, ತರಕಾರಿ, ಮಾವು ಸೇರಿದಂತೆ ಹಲವು ಬೆಳೆಗಳಿಗೆ ಕೋತಿಗಳು, ಕಾಡುಹಂದಿಗಳು ಮತ್ತು ಗಿಳಿಗಳಿಂದ ಹಾನಿಯಾಗುತ್ತಿದೆ. ಹಲವು ಬಾರಿ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೂ ಪರಿಹಾರ ಪ್ರಕ್ರಿಯೆ ವಿಳಂಬವಾಗುವುದು ಅಥವಾ ಸಣ್ಣ ಮೊತ್ತ ಮಾತ್ರ ಮಂಜೂರಾಗುವುದು ಸಾಮಾನ್ಯ.
ಕರ್ನಾಟಕದಲ್ಲಿ ವನ್ಯಜೀವಿ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ವ್ಯವಸ್ಥೆ ಇದ್ದರೂ, ಹಲವಾರು ಬಾರಿ ದಾಖಲೆ, ಪರಿಶೀಲನೆ, ತಡವಾದ ಮಂಜೂರು ಮತ್ತು ಕೆಲವು ಪ್ರಾಣಿಗಳಿಗೆ ಮಾತ್ರ ಸೀಮಿತ ಪರಿಹಾರ ಎಂಬ ಆರೋಪ ಕೇಳಿಬರುತ್ತದೆ. ಬಾಂಬೆ ಹೈಕೋರ್ಟ್ ತೀರ್ಪು ಈ ನೀತಿಗಳ ಮರುಪರಿಶೀಲನೆಗೆ ದಾರಿ ಮಾಡಿಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.