ಆಧುನಿಕ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ದಿನೇ ದಿನೇ ಕುಸಿಯುತ್ತಿದೆ. ಈ ಸವಾಲಿಗೆ ವಿಜ್ಞಾನ ಮತ್ತು ಪ್ರಕೃತಿಯ ಸಂಗಮದಂತಿರುವ ‘ಬಯೋಚಾರ್’ (Biochar) ಒಂದು ಅತ್ಯುತ್ತಮ ಪರಿಹಾರವಾಗಿ ಹೊರಹೊಮ್ಮಿದೆ. ಕೃಷಿ ತ್ಯಾಜ್ಯವನ್ನು ಕಡಿಮೆ ಆಮ್ಲಜನಕದಲ್ಲಿ ಸುಟ್ಟು ತಯಾರಿಸುವ ಈ ‘ಉನ್ನತ ದರ್ಜೆಯ ಇದ್ದಿಲು’ ಮಣ್ಣಿನ ಪಾಲಿಗೆ ಸಂಜೀವಿನಿಯಿದ್ದಂತೆ.
ಮಣ್ಣಿನ ಗುಣಮಟ್ಟ ಸುಧಾರಣೆಯಲ್ಲಿ ಬಯೋಚಾರ್ ಪಾತ್ರ
ಬಯೋಚಾರ್ ಕೇವಲ ಮಣ್ಣಿಗೆ ಹಾಕುವ ಗೊಬ್ಬರವಲ್ಲ, ಬದಲಾಗಿ ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಗಳನ್ನು ಸುಧಾರಿಸುವ ಶಕ್ತಿಶಾಲಿ ಮಾಧ್ಯಮ.
ತೇವಾಂಶ ಸಂರಕ್ಷಣೆ: ಇದು ಸ್ಪಂಜಿನಂತೆ ಕಾರ್ಯನಿರ್ವಹಿಸಿ ಮಣ್ಣಿನಲ್ಲಿ ನೀರು ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ.
ಸೂಕ್ಷ್ಮಾಣುಜೀವಿಗಳ ಆಶ್ರಯ: ಮಣ್ಣಿನ ಫಲವತ್ತತೆಗೆ ಕಾರಣವಾಗುವ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಇದು ಸುಭದ್ರವಾದ ನೆಲೆಯನ್ನು ಒದಗಿಸುತ್ತದೆ.
ಆಮ್ಲೀಯತೆ ನಿಯಂತ್ರಣ: ಮಣ್ಣಿನ pH ಮಟ್ಟವನ್ನು ಸಮತೋಲನದಲ್ಲಿಟ್ಟು ಗಿಡಗಳು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ನೆರವಾಗುತ್ತದೆ.
C:N ಅನುಪಾತ ಮತ್ತು ಬಯೋಚಾರ್ ನಿರ್ವಹಣೆ
ಬಯೋಚಾರ್ ಬಳಕೆಯಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ C:N ಅನುಪಾತ (Carbon-to-Nitrogen Ratio) ಬಯೋಚಾರ್ ಅಪ್ಪಟ ಇಂಗಾಲದ (Carbon) ಗಣಿಯಾದ್ದರಿಂದ, ಇದನ್ನು ಮಣ್ಣಿಗೆ ಸೇರಿಸಿದಾಗ ಮಣ್ಣಿನ C:N ಅನುಪಾತವು ಹೆಚ್ಚಾಗುತ್ತದೆ.
ವೈಜ್ಞಾನಿಕವಾಗಿ, ಇಂಗಾಲದ ಪ್ರಮಾಣವು ಸಾರಜನಕಕ್ಕಿಂತ ಅತಿಯಾಗಿ ಹೆಚ್ಚಾದಾಗ, ಮಣ್ಣಿನ ಸೂಕ್ಷ್ಮಾಣುಜೀವಿಗಳು ಇಂಗಾಲವನ್ನು ವಿಘಟಿಸಲು ಮಣ್ಣಿನಲ್ಲಿರುವ ಸಾರಜನಕವನ್ನೇ ಬಳಸಿಕೊಳ್ಳಬಹುದು. ಇದರಿಂದ ಗಿಡಗಳಿಗೆ ಸಾರಜನಕದ ಕೊರತೆಯಾಗುವ ಸಾಧ್ಯತೆ ಇರುತ್ತದೆ.
ಪರಿಣಾಮಕಾರಿ ಬಳಕೆಯ ಸೂತ್ರ
ಬಯೋಚಾರ್ನಿಂದ ಗರಿಷ್ಠ ಲಾಭ ಪಡೆಯಲು ಮತ್ತು C:N ಅನುಪಾತವನ್ನು ಸಮತೋಲನದಲ್ಲಿಡಲು ಈ ಕೆಳಗಿನ ಕ್ರಮಗಳು ಅವಶ್ಯಕ:
ನೇರ ಬಳಕೆ ಬೇಡ: ಬಯೋಚಾರ್ ಅನ್ನು ಮಣ್ಣಿಗೆ ನೇರವಾಗಿ ಸುರಿಯುವ ಬದಲು ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಳಸಿ.
ಬಯೋಚಾರ್ ಚಾರ್ಜಿಂಗ್: ಇದನ್ನು ದ್ರವ ಗೊಬ್ಬರಗಳಲ್ಲಿ (ಉದಾ: ಜೀವಾಮೃತ) ನೆನೆಸಿ ‘ಚಾರ್ಜ್’ ಮಾಡುವುದರಿಂದ ಸಾರಜನಕದ ಕೊರತೆಯನ್ನು ನೀಗಿಸಬಹುದು.
ಬಯೋಚಾರ್ ಭೂಮಿಯಲ್ಲಿ ಸಾವಿರಾರು ವರ್ಷಗಳ ಕಾಲ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯುವುದಲ್ಲದೆ, ರೈತರ ಪಾಲಿಗೆ ದೀರ್ಘಕಾಲಿಕ ಹೂಡಿಕೆಯಂತಿದೆ. ಸರಿಯಾದ ವೈಜ್ಞಾನಿಕ ನಿರ್ವಹಣೆಯೊಂದಿಗೆ ಇದನ್ನು ಬಳಸಿದರೆ ಮಣ್ಣಿನ ಆರೋಗ್ಯ ಮತ್ತು ಇಳುವರಿ ಎರಡನ್ನೂ ವೃದ್ಧಿಸಬಹುದು.
ನಿಮಗೆ ಗೊತ್ತೆ?
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಈಗಿರುವ ಅಮೇಜಾನ್ ಕಾಡನ್ನು ಬಯೋಚಾರ್ ಮೂಲದಿಂದ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
ಅಲ್ಲಿನ ಮೂಲ ನಿವಾಸಿಗಳು ಕೃಷಿ ತ್ಯಾಜ್ಯ, ಪ್ರಾಣಿಗಳ ಮೂಳೆಗಳು ಮತ್ತು ಮೀನಿನ ಮುಳ್ಳುಗಳನ್ನು ಹದವಾಗಿ ಸುಟ್ಟು ಆ ಇದ್ದಿಲನ್ನು ಮಣ್ಣಿಗೆ ಸೇರಿಸಿ ‘ಟೆರ್ರಾ ಪ್ರೇಟಾ’ ಎಂಬ ಮಣ್ಣನ್ನು ರೂಪಿಸಿದ್ದರು. ಅದೇ ದಟ್ಟ ಅಮೇಜಾನ್ ಕಾಡಿನ ಹಿಂದಿರುವ ರಹಸ್ಯ!
– ಸೀತಾರಾಮ ಹೆಗಡೆ ಕಾನಳ್ಳಿ.