Saturday, May 30, 2026
HomeOthersತಪ್ಪು ಹುಡುಕುವ ಕಣ್ಣುಗಳ ನಡುವೆ...

ತಪ್ಪು ಹುಡುಕುವ ಕಣ್ಣುಗಳ ನಡುವೆ…

ನಮ್ಮ ಸುತ್ತಲೂ ಕೆಲವರು ಇರುತ್ತಾರೆ. ಅವರಿಗೊಂದು ವಿಚಿತ್ರ ಅಭ್ಯಾಸ. ನಿಮ್ಮಲ್ಲಿರುವ ನೂರು ಒಳ್ಳೆಯ ಕೆಲಸಗಳು ಅವರಿಗೆ ಕಾಣುವುದೇ ಇಲ್ಲ. ಆದರೆ ಒಂದೇ ಒಂದು ತಪ್ಪು ಸಾಕು, ಅದನ್ನೇ ಹಿಡಿದು ನಿಮ್ಮನ್ನೇ ಅಳೆಯಲು ಶುರುಮಾಡುತ್ತಾರೆ!

ನೀವು ದಿನವೂ ಹತ್ತು ಕೆಲಸಗಳನ್ನು ನಿಭಾಯಿಸುತ್ತಾ, ಹೊಣೆಗಾರಿಕೆಯಿಂದ ಬದುಕನ್ನು ಸಾಗಿಸುತ್ತಿದ್ದರೂ, ಅಪರೂಪಕ್ಕೆ ಒಂದು ದಿನ ಒಂದು ಕೆಲಸ ಕೈ ತಪ್ಪಿದರೆ, “ನೀನು ಯಾವುದಕ್ಕೂ ಲಾಯಕ್ಕಿಲ್ಲ” ಎಂಬ ಮಾತು ಕೇಳಿಸಿಬಿಡುತ್ತದೆ. ತಪ್ಪು ನಿಮ್ಮದಾ ಅಥವಾ ಅವರ ದೃಷ್ಟಿಯ ಸಮಸ್ಯೆಯಾ?

ಸತ್ಯ ಏನೆಂದರೆ, ಪ್ರತಿಯೊಬ್ಬರ ಜೀವನದಲ್ಲೂ ತಪ್ಪುಗಳು ಅನಿವಾರ್ಯ. ಕೆಲಸ ಮಾಡುವವನೇ ತಪ್ಪು ಮಾಡುತ್ತಾನೆ. ಆದರೆ ಕೆಲವರು, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಥವಾ ತಮ್ಮ ಅಸಮಾಧಾನವನ್ನು ಹೊರಹಾಕಲು, ಬೇರೆಯವರ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ತೋರಿಸುತ್ತಾರೆ. ಇದು ಅವರ ಒಳಗಿನ ಅಶಾಂತಿಯೇ ನಿಮ್ಮ ಅಸಮರ್ಥತೆ ಅಲ್ಲ!

ಒಂದು ಮರ ಹತ್ತು ಹಣ್ಣು ಕೊಡುತ್ತದೆ ಎಂದುಕೊಳ್ಳಿ. ಅದರಲ್ಲಿ ಒಂದು ಹಣ್ಣು ಕೆಟ್ಟಿದ್ದರೆ, ನಾವು ಮರವನ್ನು ವ್ಯರ್ಥವೆಂದು ಹೇಳುತ್ತೇವೆಯಾ? ಇಲ್ಲ. ಆದರೆ ಕೆಲವರು ಹಾಗೆಯೇ ವರ್ತಿಸುತ್ತಾರೆ. ಇಲ್ಲಿ ಮುಖ್ಯವಾಗಿ ಅರಿತುಕೊಳ್ಳಬೇಕಾದ ಸಂಗತಿ, ನಿಮ್ಮ ಮೌಲ್ಯವನ್ನು ಇತರರ ಮಾತುಗಳಿಂದ ಅಳೆಯಬೇಡಿ. ನೀವು ದಿನವೂ ಮಾಡುತ್ತಿರುವ ಪ್ರಯತ್ನಗಳು, ನಿಮ್ಮ ಶ್ರಮ, ನಿನ್ನ ಪ್ರಾಮಾಣಿಕತೆ ಇವೇ ನಿಮ್ಮ ನಿಜವಾದ ಗುರುತು. ಯಾರಾದರೂ ಅದನ್ನು ಕಾಣದಿದ್ದರೆ, ಅದು ಅವರ ಕಣ್ಣುಗಳ ದೋಷವಷ್ಟೇ!

ಪ್ರತಿಯೊಂದು ಟೀಕೆಗೆ ಮನಸ್ಸು ಕುಗ್ಗಿಸಿಕೊಳ್ಳುವುದಕ್ಕಿಂತ, ಅದರಲ್ಲಿ ಸತ್ಯವಿದ್ದರೆ ತೆಗೆದುಕೋ, ಇಲ್ಲದಿದ್ದರೆ ಬಿಟ್ಟುಬಿಡು. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಯಾರಿಗಾದರೂ ಬೆಂಬಲವಾಗಬೇಕೇ ಹೊರತು, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವವರಾಗಬಾರದು.

ಜೀವನದಲ್ಲಿ ಬೆಳೆಯಬೇಕಾದರೆ ಟೀಕೆಗಳು ಬರುತ್ತವೆ. ಕೆಲ ಟೀಕೆಗಳು ನಮ್ಮನ್ನು ಸರಿಪಡಿಸುತ್ತವೆ. ಇನ್ನೂ ಕೆಲವು ನಮ್ಮನ್ನು ಕುಗ್ಗಿಸಲು ಪ್ರಯತ್ನಿಸುತ್ತವೆ. ಎರಡನ್ನೂ ಬೇರ್ಪಡಿಸುವ ಜ್ಞಾನವೇ ನಮ್ಮ ಬಲವಾಗಬೇಕು.

ನಮ್ಮನ್ನು ನಿರಂತರವಾಗಿ ತಪ್ಪುಗಳಿಂದ ಅಳೆಯುವವರಿಗಿಂತ, ನಮ್ಮ ಪ್ರಯತ್ನಗಳನ್ನು ಗುರುತಿಸುವವರೇ ನಿಜವಾದ ಬಂಧುಗಳು.

– ಸೌಪರ್ಣಿಕಾ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share