Friday, July 24, 2026
Join WhatsApp Group
HomeYour Voiceರೈತರಿಗೆ ಎಟುಕದ ಪೆಟ್ರೋಲ್; ಗೋಳು

ರೈತರಿಗೆ ಎಟುಕದ ಪೆಟ್ರೋಲ್; ಗೋಳು

ಕಾರವಾರ/ಯಲ್ಲಾಪುರ: ಗ್ರಾಮೀಣ ಭಾಗಗಳಲ್ಲಿ ಪೆಟ್ರೋಲ್ ಸರಬರಾಜಿನ ವ್ಯತ್ಯಯ ಮತ್ತು ಕ್ಯಾನುಳಲ್ಲಿ ಪೆಟ್ರೋಲ್ ನೀಡುವುದಕ್ಕೆ ವಿಧಿಸಿರುವ ನಿರ್ಬಂಧ ಈ ಎರಡೂ ಸಂಗತಿಗಳು ರೈತರ ದಿನನಿತ್ಯದ ಬದುಕನ್ನು ಸಂಕಷ್ಟಕ್ಕೆ ದೂಡಿವೆ.

ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿರುವ ಸಂದರ್ಭದಲ್ಲೇ ಇಂಧನದ ಲಭ್ಯತೆ ಕಡಿಮೆಯಾಗಿರುವುದು ರೈತರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕೊಲೆ ಪ್ರಕರಣದಿಂದ ಈ ಸಮಸ್ಯೆ ಇನ್ನಷ್ಟು ಬಿಗುವಿನ ವಾತಾವರಣ ಮೂಡಿಸಿದೆ. ಕಾರು ಸಮೇತ ವ್ಯಕ್ತಿಯೋರ್ವರನ್ನು ಸುಟ್ಟು ಹಾಕಿದ ಪ್ರಕರಣ ಇಡೀ ಜಿಲ್ಲೆಯಲ್ಲಿಯೇ ಆಘಾತ ಮೂಡಿಸಿತ್ತು.

ಈ ಕೃತ್ಯದಲ್ಲಿ ಕ್ಯಾನ್‌ಗಳಲ್ಲಿ ಪೆಟ್ರೋಲ್‌ ತುಂಬಿಸಿಕೊಡುವದಕ್ಕೆ ನಿರ್ಬಂಧವಿದ್ದ ಸಂದರ್ಭದಲ್ಲೂ ಯಲ್ಲಾಪುರ ಪಟ್ಟಣದ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಆರೋಪಿತರಿಗೆ ಪೆಟ್ರೋಲ್‌ ಪೂರೈಸಿದ ಕಾರಣದಿಂದ ಈಗ ನಿಯಮ ಇನ್ನಷ್ಟು ಕಟ್ಟುನಿಟ್ಟಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಪೆಟ್ರೋಲ್ ಬಂಕುಳಲ್ಲಿ ನೇರವಾಗಿ ವಾಹನಗಳಿಗೆ ಹೊರತಾಗಿ ಇತರ ವಿಧಾನಗಳಲ್ಲಿ ಪೆಟ್ರೋಲ್ ನೀಡುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಲಾಗಿದೆ. ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಸಮಂಜಸವಾದರೂ, ಅದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತಿದೆ.

ರೈತರಿಗೆ ಪೆಟ್ರೋಲ್ ಎಂದರೆ ಕೇವಲ ಬೈಕ್‌ ಕಾರ್‌ಗಳಿಗಷ್ಟೇ ಅಲ್ಲ. ನೀರಾವರಿ ಮೋಟಾರ್, ಪವರ್ ಟಿಲ್ಲರ್, ಹುಲ್ಲು ಕತ್ತರಿಸುವ ಯಂತ್ರಗಳು ಸೇರಿದಂತೆ ಅನೇಕ ಕೃಷಿ ಉಪಕರಣಗಳು ಪೆಟ್ರೋಲ್ ಮೇಲೆ ಅವಲಂಬಿತವಾಗಿವೆ. ಈಗ ಕ್ಯಾನ್ಗಳಲ್ಲಿ ಪೆಟ್ರೋಲ್ ಸಿಗದ ಕಾರಣ, ವಾಹನದಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಬಂದು ಮತ್ತೆ ಪೆಟ್ರೋಲ್ ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ, ಶ್ರಮ ಹೆಚ್ಚುವುದರ ಜೊತೆಗೆ ಅಪಾಯವೂ ಹೆಚ್ಚುತ್ತಿದೆ.

ಇದರ ನಡುವೆ, ಹಳ್ಳಿಗಳ ಸಣ್ಣ ಅಂಗಡಿಗಳಲ್ಲಿ ಬಾಟಲಿಗಳಲ್ಲಿ ಪೆಟ್ರೋಲ್ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಇದು ಕಾಳಸಂತೆಗೆ ದಾರಿ ಮಾಡಿಕೊಟ್ಟಿದೆ. ಅಧಿಕೃತವಾಗಿ ನಿರ್ಬಂಧ ಇದ್ದರೂ ಅನಧಿಕೃತ ಮಾರಾಟ ಮುಂದುವರಿಯುತ್ತಿರುವುದು ಬೆಲೆ ಏರಿಕೆ, ಗುಣಮಟ್ಟದ ಪೆಟ್ರೋಲ್‌ ಸಿಗದೇ ಯಂತ್ರಗಳು ಹಾಳಾಗುವುದಕ್ಕೂ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ, ನಮಗೆ ಸಿಗದ ಪೆಟ್ರೋಲ್‌ ಇವರಿಗೆ ಮಾತ್ರ ಕ್ಯಾನ್‌ಗಳಲ್ಲಿ ಸಿಗುತ್ತಿರುವುದಾದರೂ ಹೇಗೆ ಎಂಬ ಅನುಮಾನ ಮೂಡಿಸುತ್ತಿದೆ.

ಈ ಸಂದರ್ಭದಲ್ಲಿ ಸುರಕ್ಷತೆ ಮತ್ತು ರೈತರ ಅಗತ್ಯಗಳ ನಡುವಿನ ಸಮತೋಲನ ಹೇಗೆ ಸಾಧಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಕೃಷಿ ಬಳಕೆಗೆ ನೋಂದಾಯಿತ ಕ್ಯಾನ್ ವ್ಯವಸ್ಥೆ, ಗುರುತಿನ ಆಧಾರದ ಮೇಲೆ ಅಥವಾ ರೈತರ ಫ್ರುಟ್ಸ್‌ ಐಡಿ ಪಡೆದು ಸೀಮಿತ ಪ್ರಮಾಣದ ಪೆಟ್ರೋಲ್ ನೀಡುವುದು ಸೇರಿದಂತೆ ಅನಧಿಕೃತ ಮಾರಾಟದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾರ್ಯಗಳಾಗಬೇಕಿದೆ

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share