Friday, May 29, 2026
HomeLocal Storyʻತಂಬಾಕು ಮುಕ್ತ ಗ್ರಾಮʼ ಎಂಬ ಸುಳ್ಳು ಸಮಾಧಾನ!

ʻತಂಬಾಕು ಮುಕ್ತ ಗ್ರಾಮʼ ಎಂಬ ಸುಳ್ಳು ಸಮಾಧಾನ!

ಕರ್ನಾಟಕ ಸರ್ಕಾರ ಆಗಾಗ ಗ್ರಾಮಗಳ ಒಂದೆರಡು ಹಳ್ಳಿಗಳನ್ನು ಗುರುತಿಸಿ ʻತಂಬಾಕು ಮುಕ್ತ ಗ್ರಾಮʼ ಎಂಬ ಘೋಷಣೆ ಮಾಡುತ್ತದೆ. ಜಿಲ್ಲಾಡಳಿತಗಳು ಪತ್ರಿಕಾ ಪ್ರಕಟಣೆ ಹೊರಡಿಸುತ್ತವೆ. ಪಂಚಾಯಿತಿಗಳು ಬೋರ್ಡ್ ಹಾಕಿಸುತ್ತವೆ. ಅಧಿಕಾರಿಗಳು ಫೋಟೋ ತೆಗೆಸಿಕೊಳ್ಳುತ್ತಾರೆ. ವರದಿಗಳು ಮೇಲಾಧಿಕಾರಿಗಳ ಟೇಬಲ್ ತಲುಪುತ್ತವೆ. ಆದರೆ, ನಿಜವಾಗಿಯೂ ಆ ಗ್ರಾಮಗಳು ತಂಬಾಕು ಮುಕ್ತವಾಗಿವೆಯೇ?

ಉತ್ತರ ಕನ್ನಡ ಜಿಲ್ಲೆಯ ವಾಸ್ತವ ನೋಡಿದರೆ ಉತ್ತರ ಸ್ಪಷ್ಟವಾಗಿದೆ. ಇದು ತಂಬಾಕು ನಿಯಂತ್ರಣಕ್ಕಿಂತ ಹೆಚ್ಚು ʻಕಡತ ಪೂರೈಕೆ ಯೋಜನೆʼಯಾಗಿ ಬದಲಾಗಿದೆ ಎನ್ನುವುದನ್ನು ಘೋಷಿತ ಗ್ರಾಮಗಳೇ ಹೇಳಿಬಿಡುತ್ತವೆ!

ನಿಜ ಹೇಳಬೇಕೆಂದರೆ, ಅನೇಕ ಕಡೆ ಯಾವುದೇ ಗಂಭೀರ ಸಮೀಕ್ಷೆಯೇ ನಡೆಯುವುದಿಲ್ಲ. ಪಂಚಾಯಿತಿಯಲ್ಲಿ ಒಂದು ನಿರ್ಣಯ ಪಾಸ್ ಮಾಡುವುದು, ಗೋಡೆಯ ಮೇಲೆ ʻತಂಬಾಕು ಮುಕ್ತ ಗ್ರಾಮʼ ಬೋರ್ಡ್ ನೇತು ಹಾಕುವುದು, ಒಂದೆರಡು ಜಾಗೃತಿ ಕಾರ್ಯಕ್ರಮ ನಡೆಸಿದ ಫೋಟೋ ತೆಗೆದುಕೊಳ್ಳುವುದು ಇಷ್ಟು ಮಾಡಿದರೆ ಆ ಗ್ರಾಮ ಸರ್ಕಾರದ ದಾಖಲೆಗಳಲ್ಲಿ ʻತಂಬಾಕು ಮುಕ್ತʼವಾಗಿಬಿಡುತ್ತದೆ.

ಇದು ಆರೋಗ್ಯ ಕಾಳಜಿಗಿಂತ ಹೆಚ್ಚು ಟಾರ್ಗೆಟ್ ಮುಗಿಸಿದ ಆಡಳಿತದ ಮಾದರಿಯಂತೆ ಕಾಣುತ್ತಿದೆ. ಏಕೆಂದರೆ, ನಿಜವಾಗಿಯೂ ಸರ್ಕಾರಕ್ಕೆ ತಂಬಾಕು ನಿಯಂತ್ರಣದ ಗಂಭೀರತೆ ಇದ್ದಿದ್ದರೆ ಮೊದಲು ಶಾಲೆಗಳ ಸುತ್ತಮುತ್ತ ನಡೆಯುತ್ತಿರುವ ಮಾರಾಟವನ್ನು ನಿಲ್ಲಿಸಬೇಕಿತ್ತು. ಗ್ರಾಮೀಣ ಭಾಗಗಳಲ್ಲಿ ಅಪ್ರಾಪ್ತರಿಗೆ ಸುಲಭವಾಗಿ ಸಿಗುತ್ತಿರುವ ಗುಟ್ಕಾ, ಸಿಗರೇಟ್ ಮಾರಾಟದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಆಗುವುದು ಬೇರೆಯೇ!

ಕೆಲ ಗ್ರಾಮಗಳಲ್ಲಿ ಇನ್ನೂ ಹಾಸ್ಯಾಸ್ಪದ ಪರಿಸ್ಥಿತಿ ಇದೆ. ʻತಂಬಾಕು ಮುಕ್ತ ಗ್ರಾಮʼ ಎಂಬ ಫಲಕದ ಪಕ್ಕದಲ್ಲೇ ಪಾನ್ ಶಾಪ್‌ನಲ್ಲಿ ತಂಬಾಕು ಪ್ಯಾಕೆಟ್‌ಗಳು ನೇತಾಡುತ್ತಿರುತ್ತವೆ. ಇದು ಕೇವಲ ವೈಫಲ್ಯವಲ್ಲ; ಸಾರ್ವಜನಿಕರ ಮುಂದೆ ಆಡಳಿತವೇ ತನ್ನನ್ನು ತಾನು ಅಪಹಾಸ್ಯ ಮಾಡಿಕೊಂಡಂತಿರುತ್ತದೆಯಷ್ಟೇ.

ಪಂಚಾಯಿತಿಗಳಿಗೆ ಆರೋಗ್ಯಕರ ಸಮಾಜ ನಿರ್ಮಾಣ ಮುಖ್ಯವಲ್ಲ. ಘೋಷಣೆಯ ಪ್ರಮಾಣಪತ್ರ ಮುಖ್ಯ. ಅಧಿಕಾರಿಗಳಿಗೆ ನೆಲಮಟ್ಟದ ಬದಲಾವಣೆ ಮುಖ್ಯವಲ್ಲ. ಮೇಲಾಧಿಕಾರಿಗಳಿಗೆ ಕಳುಹಿಸುವ ಅಂಕಿಅಂಶ ಮುಖ್ಯ. ಇವೆಲ್ಲವುಗಳ ನಡುವೆ  ʻತಂಬಾಕು ಮುಕ್ತ ಗ್ರಾಮʼ ಎಂಬ ಸುಳ್ಳು ಸಮಾಧಾನದಲ್ಲಿ ಇಡೀ ಗ್ರಾಮ ಬದುಕುತ್ತಿದೆ.

ನಿಜವಾಗಿಯೂ ತಂಬಾಕು ಮುಕ್ತ ಗ್ರಾಮ ಬೇಕಾದರೆ ಮೊದಲು ಈ ಕಾಗದದ ಘೋಷಣೆಗಳ ನಾಟಕ ನಿಲ್ಲಬೇಕು. ಕಠಿಣ ಜಾರಿ, ನಿರಂತರ ಪರಿಶೀಲನೆ, ಮಾರಾಟದ ವಿರುದ್ಧ ಕ್ರಮ ಮತ್ತು ಪ್ರಾಮಾಣಿಕ ಜಾಗೃತಿ ಬೇಕು.

ಕೇವಲ ಬೋರ್ಡ್ ಹಾಕಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುವುದಿಲ್ಲ. ಕಡತದಲ್ಲಿ ‘ತಂಬಾಕು ಮುಕ್ತ’ ಎಂದು ಬರೆದರೆ ಜನರ ಶ್ವಾಸಕೋಶ ಶುದ್ಧವಾಗುವುದಿಲ್ಲ. ವಾಸ್ತವದಲ್ಲಿ ತಂಬಾಕು ಬಳಕೆ ಕಡಿಮೆಯಾಗದೇ ಇದ್ದರೆ, ಈ ಘೋಷಣೆಗಳು ಆರೋಗ್ಯ ಅಭಿಯಾನಗಳಲ್ಲ, ಜನರನ್ನು ಮೋಸಗೊಳಿಸುವ ಸರ್ಕಾರಿ ಪ್ರಚಾರ ಮಾತ್ರ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share