ಜೋಯಿಡಾ: ಒಂದು ಕಡೆ ಚಂದ್ರನ ಮೇಲೂ ಹೆಜ್ಜೆ ಇಡುವ ಭಾರತ… ಇನ್ನೊಂದು ಕಡೆ, ಶಾಲೆಗೆ ಹೋಗಲು, ಆಸ್ಪತ್ರೆಗೆ ತಲುಪಲು, ದಿನಸಿ ತರಲು ಅಥವಾ ಬದುಕಿನ ಸಾಮಾನ್ಯ ಕೆಲಸಕ್ಕೂ ಹಳ್ಳ ದಾಟುವಾಗ ಜೀವವನ್ನೇ ಪಣಕ್ಕಿಡಬೇಕಾದ ಒಂದು ಪುಟ್ಟ ಗ್ರಾಮ! ಇದು ಯಾವುದೇ ಸಿನಿಮಾ ಕಥೆಯಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸಿಸೈ-ಡಿಗ್ಗಿ ಗ್ರಾಮದ ಕಹಿ ವಾಸ್ತವ.
ಮಳೆಗಾಲ ಶುರುವಾಗುತ್ತಿದ್ದಂತೆ ಈ ಗ್ರಾಮದ ಜನರ ದಿನಚರಿ ಬದಲಾಗುತ್ತದೆ. ಮನೆ ಬಿಟ್ಟು ಹೊರಬಂದರೆ ಮೊದಲು ಎದುರಾಗುವುದು ಉಕ್ಕಿ ಹರಿಯುವ ಹಳ್ಳ. ಅದನ್ನು ದಾಟಿದರೆ ಮಾತ್ರ ಶಾಲೆ, ಆಸ್ಪತ್ರೆ, ಮಾರುಕಟ್ಟೆ, ಸರ್ಕಾರಿ ಕಚೇರಿ… ಹೀಗೆ ಹೊರಜಗತ್ತು.
ಆದರೆ ಇಲ್ಲಿ ಹಳ್ಳ ದಾಟಲು ಶಾಶ್ವತ ಕಾಲುಸಂಕವೇ ಇಲ್ಲ! ಗ್ರಾಮಸ್ಥರು ತಮ್ಮ ಶ್ರಮದಿಂದ ಕಟ್ಟಿಕೊಂಡಿರುವ ತಾತ್ಕಾಲಿಕ ಮರದ ಸಂಕವೇ ಅವರ ಜೀವದ ಆಸರೆ. ಮಳೆ ಸ್ವಲ್ಪ ಜೋರಾದರೂ ಆ ಸಂಕ ನೀರಿನಲ್ಲಿ ಮುಳುಗುತ್ತದೆ. ಆಗ ಇಡೀ ಗ್ರಾಮವೇ ಹೊರಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತದೆ.
ಇದರಿಂದ ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುವವರು ಶಾಲಾ ಮಕ್ಕಳು. ಪ್ರತಿದಿನ ಶಾಲೆಗೆ ಹೋಗಲು ಅವರು ಜೀವವನ್ನು ಕೈಯಲ್ಲಿ ಹಿಡಿದು ಹಳ್ಳ ದಾಟಲೇಬೇಕು. ಒಂದೆಡೆ ಪ್ರವಾಹದ ನೀರು, ಮತ್ತೊಂದೆಡೆ ಜಾರಿ ಬೀಳುವ ಭಯ… ಆದರೂ ಶಿಕ್ಷಣಕ್ಕಾಗಿ ಈ ಮಕ್ಕಳು ಪ್ರತಿದಿನ ಧೈರ್ಯದಿಂದ ಆ ದಾರಿಯನ್ನೇ ಹಿಡಿಯುತ್ತಾರೆ.
ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಪರಿಸ್ಥಿತಿ ಇನ್ನೂ ಗಂಭೀರ. ಗರ್ಭಿಣಿಯರು, ವೃದ್ಧರು ಅಥವಾ ಅನಾರೋಗ್ಯದಿಂದ ಬಳಲುವವರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ದೊಡ್ಡ ಸಾಹಸವಾಗುತ್ತದೆ. ಕೆಲವೊಮ್ಮೆ ಮಳೆ ಹೆಚ್ಚಾದರೆ ಗ್ರಾಮದಿಂದ ಹೊರಬರಲು ದಾರಿಯೇ ಇರುವುದಿಲ್ಲ.
ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಈ ದುಸ್ಥಿತಿ ಹೊಸದೇನಲ್ಲ. ವರ್ಷಗಳಿಂದ ಗ್ರಾಮಸ್ಥರು ರಸ್ತೆ ಮತ್ತು ಶಾಶ್ವತ ಕಾಲುಸಂಕಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.
ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಆರ್.ವಿ. ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿಯೇ ಇಂತಹ ಮೂಲಸೌಕರ್ಯದ ಕೊರತೆ ಮುಂದುವರಿದಿರುವುದು ಗ್ರಾಮಸ್ಥರಲ್ಲಿ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
“ನಮಗೆ ಐಷಾರಾಮಿ ರಸ್ತೆ ಬೇಡ… ಮಳೆ ಬಂದಾಗ ಮಕ್ಕಳೂ, ಹಿರಿಯರೂ ಸುರಕ್ಷಿತವಾಗಿ ಹಳ್ಳ ದಾಟಲು ಒಂದು ಗಟ್ಟಿಯಾದ ಕಾಲುಸಂಕ ಸಾಕು” ಎನ್ನುವುದು ಸಿಸೈ-ಡಿಗ್ಗಿ ಗ್ರಾಮಸ್ಥರ ಮನದಾಳದ ಬೇಡಿಕೆ.
ಅಭಿವೃದ್ಧಿಯ ಅಂಕಿ-ಅಂಶಗಳು ಎಷ್ಟೇ ಏರಿಕೆಯಾಗಿರಲಿ, ಒಂದು ಗ್ರಾಮ ಇನ್ನೂ ಸುರಕ್ಷಿತವಾಗಿ ಹಳ್ಳ ದಾಟುವ ಹಕ್ಕಿಗಾಗಿ ಕಾಯುತ್ತಿರುವಾಗ, ಅಭಿವೃದ್ಧಿಯ ನಿಜವಾದ ಅರ್ಥದ ಬಗ್ಗೆ ಪ್ರಶ್ನೆ ಮೂಡುವುದು ಸಹಜ.
ಮತ ಕೇಳುವಾಗ ಎಲ್ಲರಿಗೂ ದಾರಿ ಕಾಣುತ್ತದೆ, ಆದರೆ ಗ್ರಾಮಸ್ಥರಿಗೆ ದಾರಿ ಮಾಡಿಕೊಡುವಾಗ ಮಾತ್ರ ಸರ್ಕಾರದ ಹೆಜ್ಜೆ ನಿಧಾನವಾಗುತ್ತದೆ!