ಬೆಳಗ್ಗೆ ಎದ್ದ ತಕ್ಷಣ ಹಲವರ ಮನಸ್ಸಿನಲ್ಲಿ ಮೊದಲು ಬರುವ ಆಲೋಚನೆ ಏನು ಗೊತ್ತಾ?“ಯಾಕೋ ಜೀವನವೇ ಸರಿಯಿಲ್ಲ… ಎಲ್ಲರ ಬದುಕು ಸುಖವಾಗಿದೆಯೇ ಹೊರತು ಸಮಸ್ಯೆಗಳು ಮಾತ್ರ ನನ್ನನ್ನೇ ಹುಡುಕಿಕೊಂಡು ಬರುತ್ತಿವೆ” ಎನ್ನುವುದು.
ಹೇಳಬೇಕೆಂದರೆ, ಈ ಆಲೋಚನೆ ನಮ್ಮಲ್ಲಿ ಬಹುತೇಕ ಎಲ್ಲರಿಗೂ ಯಾವುದೋ ಒಂದು ಹಂತದಲ್ಲಿ ಬರುತ್ತದೆ. ಯಾಕೆಂದರೆ ನಾವು ನಮ್ಮ ನೋವನ್ನು ತುಂಬ ಹತ್ತಿರದಿಂದ ನೋಡುತ್ತೇವೆ. ಆದರೆ ಇತರರ ಬದುಕನ್ನು ದೂರದಿಂದ ಮಾತ್ರ ನೋಡುತ್ತೇವೆ. ದೂರದಿಂದ ನೋಡಿದ ಬೆಟ್ಟ ಯಾವಾಗಲೂ ಸುಂದರವಾಗಿಯೇ ಕಾಣುತ್ತದೆ. ಹತ್ತಿರ ಹೋದಾಗಲೇ ಅದರ ಕಲ್ಲು, ಮುಳ್ಳು, ಬಿರುಕುಗಳು ಕಾಣಿಸುತ್ತವೆ.
ನಮ್ಮ ಕಣ್ಣಿಗೆ ಕಾಣುವುದು ಏನು? ಸೋಶಿಯಲ್ ಮೀಡಿಯಾದಲ್ಲಿ ಹಲ್ಲು ಕಿಸಿದ ಫೋಟೋಗಳು, ಹೊಸ ಕಾರು, ಹೊಸ ಮನೆ, ಪ್ರವಾಸ, ಸಂಭ್ರಮ. ಆದರೆ ಆ ನಗುವಿನ ಹಿಂದೆ ಯಾರಿಗೆ ಎಷ್ಟು ಸಾಲವಿದೆ, ಎಷ್ಟು ನಿದ್ರೆ ಇಲ್ಲದ ರಾತ್ರಿಗಳಿವೆ, ಎಷ್ಟು ಮಾನಸಿಕ ಒತ್ತಡ ಇದೆ ಎನ್ನುವುದು ಯಾರಿಗೂ ಕಾಣುವುದಿಲ್ಲ.
ಕೆಲವರು ಜೀವನದಲ್ಲಿ ತುಂಬಾ ಆರಾಮವಾಗಿ ಕಾಣುತ್ತಾರೆ. ಆದರೆ ಅವರೊಳಗೆ ಪ್ರತಿದಿನ ಬಿರುಗಾಳಿ ಬೀಸುತ್ತಿರಬಹುದು. ನಮಗೆಲ್ಲಿ ಗೊತ್ತು?! ಇನ್ನೂ ಕೆಲವರು ಯಾವಾಗಲೂ ನಗುತ್ತಿರುತ್ತಾರೆ. ಆದರೆ ಅವರು ರಾತ್ರಿ ತಲೆಯನ್ನು ದಿಂಬಿಗೆ ಇಟ್ಟಾಗ ಕಣ್ಣೀರನ್ನು ಮರೆಮಾಚಿಕೊಂಡೇ ಮಲಗುತ್ತಿರಬಹುದು.
ಸಮಸ್ಯೆಗಳಿಲ್ಲದ ಜೀವನ ಯಾರಿಗೂ ಸಿಗುವುದೇ ಇಲ್ಲ. ಕೆಲವರು ಕಷ್ಟ ಬಂದಾಗ ಕುಸಿದು ಬೀಳುತ್ತಾರೆ. ಕೆಲವರು ಅದನ್ನೇ ತಮ್ಮ ಶಕ್ತಿಯನ್ನಾಗಿಸಿಕೊಂಡು ಮುಂದೆ ಸಾಗುತ್ತಾರೆ. ಕಷ್ಟಗಳು ನಮ್ಮನ್ನು ತಡೆಯಲು ಬರುವುದಿಲ್ಲ.ಅವು ನಮ್ಮೊಳಗಿನ ಶಕ್ತಿಯನ್ನು ಎಬ್ಬಿಸಲು ಬರುತ್ತವೆ.
ಒಂದು ಬೀಜವನ್ನು ನೋಡಿ. ಅದು ಮಣ್ಣಿನೊಳಗೆ ಹೂಳಲ್ಪಡುತ್ತದೆ. ಕತ್ತಲಲ್ಲಿ ಇರುತ್ತದೆ. ಮಳೆಯ ಹೊಡೆತ ತಾಳುತ್ತದೆ. ಉರಿ ಬಿಸಿಲನ್ನು ಎದುರಿಸುತ್ತದೆ. ಆದರೆ ಅದು “ನನ್ನನ್ನೇಕೆ ಹೂತುಬಿಟ್ಟರು?” ಎಂದು ಅಳುವುದಿಲ್ಲ. ಅದೇ ಒತ್ತಡವನ್ನು ಬಳಸಿಕೊಂಡು ಮೊಳಕೆ ಒಡೆಯುತ್ತದೆ. ನಂತರ ಮರವಾಗುತ್ತದೆ. ನೆರಳು ಕೊಡುತ್ತದೆ. ಹಣ್ಣು ಕೊಡುತ್ತದೆ.
ಆದ್ದರಿಂದ ಜೀವನದಲ್ಲಿ“ನನಗೆ ಮಾತ್ರ ಏಕೆ ಈ ಸಮಸ್ಯೆ?” ಎಂದು ಕೇಳುವುದನ್ನು ಬಿಟ್ಟು, “ಈ ಸಮಸ್ಯೆ ನನಗೆ ಏನು ಕಲಿಸುತ್ತಿದೆ?” ಎಂದು ಕೇಳಲು ಶುರು ಮಾಡಿ. ಆಗ ಜೀವನದ ದೃಷ್ಟಿಯೇ ಬದಲಾಗುತ್ತದೆ. ಗಾಳಿ ಎದುರಿಸದ ಗಾಳಿಪಟ ಆಕಾಶಕ್ಕೆ ಏರದು. ಬೆಂಕಿ ತಾಕದ ಬಂಗಾರ ಹೊಳೆಯದು. ಹೋರಾಟ ನೋಡದ ವ್ಯಕ್ತಿ ಗಟ್ಟಿಯಾಗುವುದಿಲ್ಲ.
ಇವತ್ತಿನಿಂದ ಒಂದು ಚಿಕ್ಕ ಬದಲಾವಣೆ ಮಾಡೋಣ.ಇತರರ ಜೀವನ ನೋಡಿ ಬೇಸರಪಡುವುದನ್ನು ಕಡಿಮೆ ಮಾಡೋಣ. ಯಾಕೆಂದರೆ ಜೀವನದಲ್ಲಿ ನಿಜವಾದ ಸ್ಪರ್ಧೆ ಯಾರ ಜೊತೆಯೂ ಅಲ್ಲ. ಅದೇನಿದ್ದರೂ ನಿನ್ನೆಗಿನ “ನೀನು” ಮತ್ತು ಇಂದಿನ “ನೀನು” ಈ ಎರಡರ ನಡುವೆ ಮಾತ್ರ. ನಿನ್ನೆ ಕುಸಿದುಬಿದ್ದಿದ್ದರೆ, ಇವತ್ತು ಎದ್ದು ನಿಲ್ಲು. ನಿನ್ನೆ ಭಯಪಟ್ಟಿದ್ದರೆ, ಇವತ್ತು ಒಂದು ಹೆಜ್ಜೆ ಮುಂದೆ ಇಡು. ನಿನ್ನೆ ಸೋತಿದ್ದರೆ, ಇವತ್ತು ಮತ್ತೆ ಪ್ರಯತ್ನಿಸು.
ಬೆಳಗ್ಗೆ ಎದ್ದ ತಕ್ಷಣ ಜೀವನದ ಮೇಲೆ ದೂರು ಹೇಳಬೇಡಿ. ಕಷ್ಟಗಳನ್ನು ಎಣಿಸುತ್ತಾ ದಿನ ಆರಂಭಿಸಬೇಡಿ. ನಿಮ್ಮೊಳಗಿನ ಶಕ್ತಿಯನ್ನು ನೆನಪಿಸಿಕೊಂಡು ಆರಂಭಿಸಿ! ಆಗಲೇ ಲೈಫ್ ಜಿಂಗಾಲಾಲ!
- _ ಸೌಪರ್ಣಿಕಾ