Saturday, May 30, 2026
HomeInformationಮಳೆ-ಮಣ್ಣಿನ ಘಮದ ಹಿಂದಿನ ನಂಟು!

ಮಳೆ-ಮಣ್ಣಿನ ಘಮದ ಹಿಂದಿನ ನಂಟು!

ಮೊದಲ ಮಳೆ ಬೀಳುವ ಮುನ್ನ ಏಕಾಏಕಿ ಗಾಳಿಯಲ್ಲಿ ಹರಡುವ ಒಂದು ವಿಶೇಷ ಘಮ…ಒಣ ಮಣ್ಣಿನ ಮೇಲೆ ಮೊದಲ ಹನಿಗಳು ಬಿದ್ದಾಗ ಮೂಡುವ ಆ ಪರಿಮಳ…ಎಷ್ಟೇ ಬ್ಯುಸಿ ಜೀವನವಾಗಿದ್ದರೂ, ಆ ಘಮ ಬಂದ ತಕ್ಷಣ ಹಲವರು ಕ್ಷಣಕಾಲ ನಿಂತು ಆಕಾಶದ ಕಡೆ ನೋಡುತ್ತಾರೆ.

ಕೆಲವರಿಗೆ ಬಾಲ್ಯದ ನೆನಪು ಬರುತ್ತದೆ. ಇನ್ನೂ ಕೆಲವರಿಗೆ ಊರು ನೆನಪಾಗುತ್ತದೆ. ಕೆಲವರು “ಮಳೆ ಬರುತ್ತಿದೆ” ಎಂದು ಹೇಳುವುದಕ್ಕೂ ಮುಂಚೆ ಆ ಸರ್ವವ್ಯಾಪಿ ಘಮಲೇ ಮಳೆಯ ಸುದ್ದಿ ಕೊಡುತ್ತದೆ.ಆದರೆ ಎಂದಾದರೂ ಯೋಚಿಸಿದ್ದೀರಾ? ಮಣ್ಣಿಗೆ ವಾಸನೆ ಹೇಗೆ ಬರುತ್ತದೆ? ಮಳೆ ಬರುವ ಮುನ್ನವೇ ಆ ಪರಿಮಳ ಗಾಳಿಯಲ್ಲಿ ಹರಡುವುದೇಕೆ? ಇದು ಕೇವಲ ಭಾವನೆಯಾ? ಅಥವಾ ಇದರ ಹಿಂದೆ ವಿಜ್ಞಾನ ಇದೆಯಾ?

ನಿಜವಾಗಿ ಹೇಳಬೇಕೆಂದರೆ, ಈ ಸುಗಂಧದ ಹಿಂದೆ ಪ್ರಕೃತಿಯ ಅದ್ಭುತ ರಸಾಯನಶಾಸ್ತ್ರ ಅಡಗಿದೆ.ವಿಜ್ಞಾನದಲ್ಲಿ ಈ ವಿಶೇಷ ಮಣ್ಣಿನ ವಾಸನೆಗೆ “Petrichor” ಎಂಬ ಹೆಸರು ಇದೆ. 1960ರ ದಶಕದಲ್ಲಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಈ ಪದವನ್ನು ಬಳಸಲು ಆರಂಭಿಸಿದರು. ಗ್ರೀಕ್ ಭಾಷೆಯಲ್ಲಿ “Petra” ಅಂದರೆ ಕಲ್ಲು, “Ichor” ಅಂದರೆ ದೇವರ ರಕ್ತ ಎಂದು ಅರ್ಥ. ಅಂದರೆ ಮಳೆ ತೇವಗೊಂಡ ಭೂಮಿಯಿಂದ ಹೊರಬರುವ ಪ್ರಕೃತಿಯ ಪರಿಮಳ.

ಈ ಸುಗಂಧ ಹುಟ್ಟುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಮಣ್ಣಿನೊಳಗಿನ ಸೂಕ್ಷ್ಮಜೀವಿಗಳು. ವಿಶೇಷವಾಗಿ “Actinomycetes” ಎಂಬ ಬ್ಯಾಕ್ಟೀರಿಯಾಗಳು. ಒಣ ಹವಾಮಾನದಲ್ಲಿ ಇವು ಮಣ್ಣಿನೊಳಗೆ “Geosmin” ಎಂಬ ರಾಸಾಯನಿಕ ಸಂಯೋಗವನ್ನು ಉತ್ಪಾದಿಸುತ್ತವೆ. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ಈ ರಾಸಾಯನಿಕ ಗಾಳಿಯಲ್ಲಿ ಹರಡಿ ನಮ್ಮ ಮೂಗಿಗೆ ತಲುಪುತ್ತದೆ. ಅದೇ ನಾವು ಅನುಭವಿಸುವ ಆ ವಿಶಿಷ್ಟ ಮಣ್ಣಿನ ಪರಿಮಳ.

ಆಶ್ಚರ್ಯದ ವಿಷಯ ಏನೆಂದರೆ, ಮಾನವನ ಮೂಗು Geosmin ಅನ್ನು ಅತ್ಯಂತ ಸೂಕ್ಷ್ಮ ಪ್ರಮಾಣದಲ್ಲೂ ಗುರುತಿಸಬಲ್ಲದು. ಕೆಲ ವಿಜ್ಞಾನಿಗಳ ಪ್ರಕಾರ, ಶಾರ್ಕ್ ಮೀನು ರಕ್ತವನ್ನು ಗುರುತಿಸುವಷ್ಟು ಸೂಕ್ಷ್ಮತೆಯಿಂದಲೇ ಮನುಷ್ಯ ಈ ಮಣ್ಣಿನ ವಾಸನೆಯನ್ನು ಗುರುತಿಸಬಲ್ಲನೆಂದು ಹೇಳಲಾಗುತ್ತದೆ.

ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ, ಮಳೆ ಬರುವ ಮುನ್ನ ಕೆಲವೊಮ್ಮೆ ವಾಸನೆ ಮೊದಲೇ ಬರುತ್ತದೆ. ಅದಕ್ಕೆ ಕಾರಣ ಗಾಳಿಯಲ್ಲಿರುವ ತೇವಾಂಶ ಮತ್ತು ಒತ್ತಡದ ಬದಲಾವಣೆ. ಮಳೆಯ ಮುನ್ನ ಗಾಳಿಯಲ್ಲಿನ ತೇವಾಂಶ ಹೆಚ್ಚಾದಾಗ, ಸಸ್ಯಗಳು ಮತ್ತು ಮಣ್ಣಿನಲ್ಲಿರುವ ಕೆಲ ರಾಸಾಯನಿಕ ಅಂಶಗಳು ಗಾಳಿಗೆ ಬಿಡುಗಡೆಯಾಗುತ್ತವೆ. ಜೊತೆಗೆ ದೂರದಲ್ಲಿ ಸುರಿಯುತ್ತಿರುವ ಮಳೆಯ ಗಾಳಿಯೂ ಈ ಪರಿಮಳವನ್ನು ಹೊತ್ತು ತರುತ್ತದೆ.

ಕೆಲ ಸಂದರ್ಭಗಳಲ್ಲಿ ಮಿಂಚು-ಗುಡುಗಿನ ಮುನ್ನ ಬರುವ ವಾಸನೆಗೆ “ಓಜೋನ್” ಕಾರಣವಾಗಿರುತ್ತದೆ. ಮಿಂಚಿನ ವಿದ್ಯುತ್ ವಾತಾವರಣದಲ್ಲಿರುವ ಆಮ್ಲಜನಕ ಮತ್ತು ನೈಟ್ರೋಜನ್ ಅಣುಗಳ ಮೇಲೆ ಪರಿಣಾಮ ಬೀರಿದಾಗ ಸಣ್ಣ ಪ್ರಮಾಣದಲ್ಲಿ ಓಜೋನ್ ಉತ್ಪತ್ತಿಯಾಗುತ್ತದೆ. ಅದು ಕೂಡ ಕೆಲವೊಮ್ಮೆ “ಮಳೆ ವಾಸನೆ”ಯ ಭಾಗವಾಗಿರುತ್ತದೆ.

ಗ್ರಾಮೀಣ ಪ್ರದೇಶದ ಜನರಿಗೆ ಈ ಸುಗಂಧ ಹೊಸದೇನಲ್ಲ. ಹಳೆಯ ಕಾಲದಲ್ಲಿ ರೈತರು “ಮಣ್ಣಿನ ವಾಸನೆ ನೋಡಿ” ಮಳೆಯ ಅಂದಾಜು ಮಾಡುತ್ತಿದ್ದರು. ಮೋಡಗಳ ಬಣ್ಣ, ಗಾಳಿಯ ದಿಕ್ಕು, ಪಕ್ಷಿಗಳ ಚಲನೆ ಮತ್ತು ಈ ಮಣ್ಣಿನ ಪರಿಮಳ ಇವೆಲ್ಲವೂ ಅವರಿಗೆ ಪ್ರಕೃತಿಯ ಸೂಚನೆಗಳಾಗಿದ್ದವು. ಇಂದಿನ ಡಾಪ್ಲರ್ ರಡಾರ್‌, ಹವಾಮಾನ ಆ್ಯಪ್‌ಗಳು ಬರೋದಕ್ಕೂ ಮುಂಚೆ ಪ್ರಕೃತಿಯೇ ಅವರ ಹವಾಮಾನ ಇಲಾಖೆ ಆಗಿತ್ತು.

ಯಾಕೆ ಈ ವಾಸನೆ ನಮಗೆ ಇಷ್ಟು ಇಷ್ಟವಾಗುತ್ತದೆ?ಇದಕ್ಕೂ ವಿಜ್ಞಾನಿಗಳ ಬಳಿ ಒಂದು ವಿವರಣೆ ಇದೆ. ಸಾವಿರಾರು ವರ್ಷಗಳ ಹಿಂದೆ ಮಳೆ ಅಂದರೆ ಬದುಕು. ನೀರು, ಆಹಾರ, ಬೆಳೆ, ಜೀವನ ಎಲ್ಲವೂ ಮಳೆಯ ಜೊತೆ ಸಂಬಂಧಿಸಿದ್ದವು. ಆದ್ದರಿಂದ ಮಳೆ ಬರುವ ಸೂಚನೆಗೆ ಮಾನವನ ಮೆದುಳು ಸಹಜವಾಗಿ ಒಳ್ಳೆಯ ಪ್ರತಿಕ್ರಿಯೆ ನೀಡುವಂತೆ ಅಭಿವೃದ್ಧಿಯಾಗಿರಬಹುದು ಎಂದು ಕೆಲ ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಅಂದರೆ ಈ ವಾಸನೆ ನಮ್ಮೊಳಗಿನ ಪುರಾತನ ಪ್ರಕೃತಿ ನೆನಪುಗಳನ್ನು ಎಚ್ಚರಿಸುತ್ತಿರಬಹುದು.ಬಹುಶಃ ಅದಕ್ಕೇ ಇರಬಹುದು…ಮೊದಲ ಮಳೆಯ ಸುಗಂಧ ಹರಡಿದಾಗ ಮನಸ್ಸು ಸ್ವಲ್ಪ ಶಾಂತವಾಗುತ್ತದೆ. ಹೇಳಲಾರದ ಖುಷಿ ಮೂಡುತ್ತದೆ. ನಗರದ ಕಾಂಕ್ರೀಟ್ ಬದುಕಿನ ಮಧ್ಯೆಯೂ ಮನುಷ್ಯ ಮತ್ತೆ ಪ್ರಕೃತಿಯತ್ತ ಎಳೆಯಲ್ಪಡುತ್ತಾನೆ.

ನಾವು ಇಂದು ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದೇವೆ. Artificial Intelligence, satellites, robotics ಎಲ್ಲವೂ ಬಂದಿದೆ. ಆದರೆ ಇನ್ನೂ ಒಂದು ಮಳೆಯ ವಾಸನೆ ಮಾತ್ರ ಮನುಷ್ಯನ ಮನಸ್ಸನ್ನು ಕ್ಷಣಾರ್ಧದಲ್ಲಿ ಬಾಲ್ಯಕ್ಕೆ ಕರೆದೊಯ್ಯಬಲ್ಲದು.ಅದೇ ಪ್ರಕೃತಿಯ ನಿಜವಾದ ಶಕ್ತಿ. ಅದೇ ಮಣ್ಣಿನ ಜೊತೆಗಿನ ನಮ್ಮ ಸಂಬಂಧ!

– ಸತೀಶ್ ಮಾಗೋಡು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share