Saturday, May 30, 2026
HomeInformationಒಂದು ಚಹಾ ಖರ್ಚಿನಲ್ಲಿ ಅಪಘಾತ ವಿಮೆ!

ಒಂದು ಚಹಾ ಖರ್ಚಿನಲ್ಲಿ ಅಪಘಾತ ವಿಮೆ!

ಇಂದಿನ ವೇಗದ ಬದುಕಿನಲ್ಲಿ ಅಪಘಾತಗಳು ಯಾವ ಕ್ಷಣದಲ್ಲಿ ಎದುರಾಗುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಮನೆಯ ಆಧಾರಸ್ತಂಭವಾಗಿರುವ ವ್ಯಕ್ತಿಗೆ ಏನಾದರೂ ಅನಾಹುತ ಸಂಭವಿಸಿದರೆ, ಕುಟುಂಬದ ಬದುಕೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಅತಿ ಕಡಿಮೆ ವೆಚ್ಚದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY).

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂಬುದು ಸಾಮಾನ್ಯ ಜನರಿಗೆ, ವಿಶೇಷವಾಗಿ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಡಿಮೆ ವೆಚ್ಚದಲ್ಲಿ ಅಪಘಾತ ವಿಮಾ ರಕ್ಷಣೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ.

2015-16ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲ್ಪಟ್ಟ ಈ ಯೋಜನೆ, ಅಪಘಾತದಿಂದ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂಭವಿಸಿದ ಸಂದರ್ಭಗಳಲ್ಲಿ ಕುಟುಂಬಗಳಿಗೆ ತುರ್ತು ಆರ್ಥಿಕ ನೆರವು ನೀಡುವ ಆಶಯ ಹೊಂದಿದೆ. ಮನೆಯಲ್ಲೊಬ್ಬ ದುಡಿಯುವ ವ್ಯಕ್ತಿ ಅನಿರೀಕ್ಷಿತ ಅಪಘಾತಕ್ಕೆ ಒಳಗಾಗಿ ಜೀವ ಕಳೆದುಕೊಂಡರೆ ಅಥವಾ ಕೆಲಸ ಮಾಡಲು ಅಸಮರ್ಥರಾದರೆ, ಆ ಕುಟುಂಬಕ್ಕೆ ಎದುರಾಗುವ ಸಂಕಷ್ಟ ಅಳತೆ ಮೀರಿರುತ್ತದೆ.

ಮಕ್ಕಳ ಶಿಕ್ಷಣ, ಮನೆಯ ಖರ್ಚು, ಸಾಲ, ವೈದ್ಯಕೀಯ ವೆಚ್ಚ ಸೇರಿದಂತೆ ಅನೇಕ ಹೊರೆಗಳು ಒಂದೇ ಕ್ಷಣದಲ್ಲಿ ಕುಟುಂಬದ ಮೇಲೆ ಬೀಳುತ್ತವೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಆರ್ಥಿಕ ಭದ್ರತೆಯಾದರೂ ದೊರೆಯಲಿ ಎಂಬ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ವಿಶೇಷತೆಯೇ ಅದರ ಅತೀ ಕಡಿಮೆ ಪ್ರೀಮಿಯಂ. ವರ್ಷಕ್ಕೆ ಕೇವಲ 20 ರೂ ಪಾವತಿಸಿದರೆ 2 ಲಕ್ಷದವರೆಗೆ ಅಪಘಾತ ವಿಮಾ ರಕ್ಷಣೆ ದೊರೆಯುತ್ತದೆ. ದಿನಕ್ಕೆ ಲೆಕ್ಕ ಹಾಕಿದರೆ ಇದು ಕೇವಲ 5 ಪೈಸೆ ಮಾತ್ರ.

ಯೋಜನೆ ಪ್ರತಿ ವರ್ಷ ಜೂನ್ 1ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಪ್ರತಿವರ್ಷ ನವೀಕರಣ ಮಾಡಿಸಿಕೊಳ್ಳಬೇಕು. 18ರಿಂದ 70 ವರ್ಷದೊಳಗಿನ ಯಾವುದೇ ಭಾರತೀಯ ನಾಗರಿಕರು ಯೋಜನೆಗೆ ಸೇರಬಹುದಾಗಿದೆ.

ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರಬೇಕು ಹಾಗೂ ಆಧಾರ್ ಸಂಖ್ಯೆಯನ್ನು ಖಾತೆಗೆ ಜೋಡಿಸಿರಬೇಕು. ಖಾತೆಯಲ್ಲಿ ಪ್ರೀಮಿಯಂ ಕಡಿತಕ್ಕೆ ಅಗತ್ಯ ಹಣ ಇದ್ದರೆ ವಿಮೆ ಸಕ್ರಿಯವಾಗುತ್ತದೆ. ಒಬ್ಬ ವ್ಯಕ್ತಿಗೆ ಹಲವು ಬ್ಯಾಂಕ್ ಖಾತೆಗಳಿದ್ದರೂ, ಒಂದು ಆಧಾರ್ ಸಂಖ್ಯೆಗೆ ಗರಿಷ್ಠ 2 ಲಕ್ಷದ ವಿಮಾ ಪರಿಹಾರ ಮಾತ್ರ ದೊರೆಯುತ್ತದೆ.

ರಸ್ತೆ ಅಪಘಾತ, ವಾಹನ ಅಪಘಾತ, ಪ್ರವಾಹ, ಭೂಕಂಪ, ವಿಷಕಾರಿ ಪ್ರಾಣಿ ಕಡಿತ, ಮರದಿಂದ ಬಿದ್ದು ಸಾವು ಅಥವಾ ಶಾಶ್ವತ ಅಂಗವೈಕಲ್ಯ, ಕೊಲೆ ಪ್ರಕರಣಗಳಂತಹ ಅನೇಕ ಸಂದರ್ಭಗಳಲ್ಲಿ ಈ ವಿಮೆ ಅನ್ವಯವಾಗುತ್ತದೆ.

ಆದರೆ ಆತ್ಮಹತ್ಯೆಗೆ ವಿಮಾ ಪರಿಹಾರ ಸಿಗುವುದಿಲ್ಲ. ಈ ಯೋಜನೆಯಲ್ಲಿ “ವೇಟಿಂಗ್ ಪಿರಿಯಡ್” ಎಂಬ ನಿಯಮವೂ ಇಲ್ಲ. ಇಂದು ವಿಮೆ ಮಾಡಿಸಿಕೊಂಡು, ನಾಳೆಯೇ ಅಪಘಾತ ಸಂಭವಿಸಿದರೂ ನಾಮನಿರ್ದೇಶಿತರಿಗೆ ಪೂರ್ಣ ವಿಮಾ ಮೊತ್ತ ದೊರೆಯುತ್ತದೆ. ಆದರೆ ಯೋಜನೆಯ ಅವಧಿ ಪೂರ್ಣಗೊಂಡ ನಂತರ ಯಾವುದೇ maturity amount ಅಥವಾ ಹಣ ಹಿಂದಿರುಗುವುದಿಲ್ಲ.

ಯೋಜನೆಯ ಮಹತ್ವ ಎಷ್ಟೇ ಇದ್ದರೂ, ಇನ್ನೂ ದೇಶದ ಅನೇಕ ಜನರು ಇದರ ಪ್ರಯೋಜನದಿಂದ ದೂರವಿದ್ದಾರೆ. ಜಾಗೃತಿ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ 2 ಲಕ್ಷ ರೂ ಪರಿಹಾರ ಸಾಕಾಗುತ್ತದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.

ಒಂದು ಕುಟುಂಬದ ಮುಖ್ಯ ಆದಾಯದ ಮೂಲವನ್ನೇ ಕಳೆದುಕೊಂಡ ನಂತರ ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಸಾಲದ ಹೊರೆ ಮುಂತಾದವುಗಳನ್ನು ನಿರ್ವಹಿಸಲು ಈ ಮೊತ್ತ ಸಾಕಾಗುವುದು ಕಷ್ಟ. ಆದ್ದರಿಂದ ವಿಮಾ ಮೊತ್ತವನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಪ್ರೀಮಿಯಂ ಸ್ವಲ್ಪ ಹೆಚ್ಚಾದರೂ, ಕುಟುಂಬಕ್ಕೆ ನಿಜವಾದ ಭದ್ರತೆ ದೊರೆಯುವುದು ಮುಖ್ಯ.

ಅಪಘಾತ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಕನಿಷ್ಠ ರಕ್ಷಣಾ ಕವಚವನ್ನು ಹೊಂದುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ, ಕೇವಲ 20 ರೂ ಪಾವತಿಸಿ ಈ ಯೋಜನೆಗೆ ಸೇರುವುದು ಒಂದು ಕುಟುಂಬದ ಭವಿಷ್ಯವನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಬಹುದು.

– ಡಾ. ರವಿಕಿರಣ ಪಟವರ್ಧನ್.‌

ಆಯುರ್ವೇದ ವೈದ್ಯರು, ಶಿರಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share