ಅಂಕೋಲಾ: ತಾಲೂಕಿನ ತೆಂಕಣಕೇರಿ ಪ್ರದೇಶದಲ್ಲಿ ಅಂಗಡಿ ಎದುರು ಅನಧಿಕೃತವಾಗಿ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಯಾನಂದ ಗಾಂವಕರ (46), ಸುರೇಶ ಗಾಂವಕರ (65) ಹಾಗೂ ಶ್ರೀಕಾಂತ ಗಾಂವಕರ (61) ಆರೋಪಿಗಳಾಗಿದ್ದಾರೆ. ಇವರು ಪೂಜಗೇರಿ ನಿವಾಸಿಗಳಾಗಿದ್ದು, ಅಂಗಡಿ ವ್ಯಾಪಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ. 18ರಂದು ರಾತ್ರಿ ಅಂಕೋಲಾ-ಮಂಜಗುಣಿ ರಸ್ತೆಯ ಬದಿಯಲ್ಲಿರುವ ಅಂಗಡಿ ಎದುರು ಯಾವುದೇ ಪರವಾನಿಗೆ ಪಡೆಯದೇ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ ವೇಳೆ ವಿವಿಧ ಬ್ರ್ಯಾಂಡ್‌ಗಳ ಮದ್ಯದ ತುಂಬಿದ ಹಾಗೂ ಖಾಲಿ ಟೆಟ್ರಾ ಪ್ಯಾಕೆಟ್‌ಗಳು, ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.