Saturday, May 30, 2026
HomeLocal Storyಹವ್ಯಕ ಮಾಣಿಯ ಮದುವೆ ಮಾರುಕಟ್ಟೆಯಲ್ಲೊಂದು ಹೊಸ ರಿಯಾಲಿಟಿ!

ಹವ್ಯಕ ಮಾಣಿಯ ಮದುವೆ ಮಾರುಕಟ್ಟೆಯಲ್ಲೊಂದು ಹೊಸ ರಿಯಾಲಿಟಿ!

ಲಕ್ಷ ಸಂಬಳವೆಣಿಸುವ ನೌಕರಿಯಷ್ಟೇ ಅಲ್ಲ, ಊರಲ್ಲಿ ಜಮೀನೂ ಬೇಕು!

ಕಾರವಾರ: ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡದ ಹವ್ಯಕ ಕುಟುಂಬಗಳಲ್ಲಿ ಮದುವೆ ಮಾತುಕತೆ ಎಂದರೆ ಹುಡಗ ಒಳ್ಳೆಯವನಾ?, ಕುಟುಂಬ ಹೇಗಿದೆ?, ಸ್ವಭಾವ ಹೇಗೆ ಎಂಬ ಪ್ರಶ್ನೆಗಳ ಸುತ್ತಲೇ ತಿರುಗುತ್ತಿತ್ತು. ಈಗ ಕಾಲ ಬದಲಾಗಿದೆ. ಈಗಿನ ಮದುವೆ ಮಾರುಕಟ್ಟೆಯಲ್ಲಿ ವರನ ಗುಣಗಾನಕ್ಕಿಂತ ಅವನ ಪ್ಯಾಕೇಜ್‌ಗೆ ಹೆಚ್ಚು ಬೆಲೆ. ಅದು ಕೂಡ ಕೇವಲ ಬೆಂಗಳೂರಿನ ಐಟಿ ಕಂಪನಿಯ ಸಂಬಳದ ಪ್ಯಾಕೇಜ್‌ ಅಲ್ಲ, ಅದರ ಜೊತೆಗೇ ಊರಿನಲ್ಲಿ ಎಷ್ಟು ಎಕರೆ ಅಡಕೆ ತೋಟ ಇದೆ ಎಂಬುದೂ ಕ್ರಿಟಿಕಲ್ ಫ್ಯಾಕ್ಟರ್‌!

ಉತ್ತರ ಕನ್ನಡದಲ್ಲಿ, ಅದರಲ್ಲೂ ಹವ್ಯಕ ಬ್ರಾಹ್ಮಣ ಸಮುದಾಯದಲ್ಲಿ 35-40 ವರ್ಷ ದಾಟಿದರೂ ಮದುವೆಯಾಗದೆ ಉಳಿಯುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ಮಾತುಗಳು ಇತ್ತೀಚೆಗೆ ಸಾಮಾನ್ಯ. ಹಳ್ಳಿಯಲ್ಲೇ ಪಾಲಕರೊಂದಿಗೆ ಇದ್ದು ಕೃಷಿ ನೋಡಿಕೊಳ್ಳುವ ಹುಡುಗರ ಪರಿಸ್ಥಿತಿ ಮತ್ತಷ್ಟು ಕಠಿಣ.

ಇನ್ನು ಬೆಂಗಳೂರಿನಲ್ಲಿ ಒಳ್ಳೆಯ ಸಂಬಳದ ಉದ್ಯೋಗದಲ್ಲಿರುವ ಹುಡುಗರಿಗೂ ಸುಲಭವಿಲ್ಲ. ಹಿಂದೆ ಲಕ್ಷದ ಸಂಬಳ ಸಾಕಾಗುತ್ತಿತ್ತು. ನಂತರ ಸ್ವಂತ ಮನೆ ಸೇರಿತು. ಅದರ ನಂತರ ಕಾರ್ ಯಾವದು? ಎಂಬ ಪ್ರಶ್ನೆ ಬಂತು. ಈಗ ಹೊಸ ಅಪ್‌ಡೇಟ್‌ ಏನೆಂದರೆ,  ʻಹುಟ್ಟೂರಲ್ಲಿ ಕನಿಷ್ಠ ನಾಲ್ಕು ಎಕರೆ ಅಡಕೆ ತೋಟ ಇದೆಯಾ? ಅದು ಹುಡುಗನ ಹೆಸರಲ್ಲೇ ಇದೆಯಾ?ʼ

ಮಾತು ಕೇಳಿ ಆಶ್ಚರ್ಯವಾಗಬಹುದು. ಇಂದಿನ ಕಾಲದಲ್ಲೂ ಹೀಗೆ ಕೃಷಿ ಬದುಕು, ಜಮೀನನ್ನು ಇಷ್ಟೊಂದು ಇಷ್ಟಪಡುವ ಹುಡುಗಿಯರೂ ಇದ್ದಾರಾ?! ಮದುವೆ ಮಾತುಕತೆಗಳು ಕೆಲವೊಮ್ಮೆ ಉದ್ಯೋಗ ಸಂದರ್ಶನಕ್ಕಿಂತ ಗಂಭೀರವಾಗುತ್ತಿವೆ ಎನ್ನುವುದು ಹಲವರ ಅಳಲು.

ಇದರ ಹಿಂದೆ ಕೇವಲ ಆರ್ಥಿಕ ಭದ್ರತೆ ನೋಡುವ ಮನೋಭಾವ ಮಾತ್ರವಿಲ್ಲ. ಕೆಲವರು ಹೇಳುವಂತೆ, ಮುಂದೆ ಯಾವುದಾದರೂ ಕಾರಣಕ್ಕೆ ದಾಂಪತ್ಯದಲ್ಲಿ ಬಿರುಕು ಬಿದ್ದರೆ ಜೀವನಾಂಶದ ಲೆಕ್ಕದಲ್ಲಿ ಆಸ್ತಿ ಕೂಡ ಸೇರುತ್ತದೆ ಎಂಬ ಲೆಕ್ಕಾಚಾರವೂ ಕೆಲ ಕುಟುಂಬಗಳ ಯೋಚನೆಯಲ್ಲಿ ಸೇರಿದೆ ಎನ್ನಲಾಗುತ್ತಿದೆ. ಈ ಅನುಮಾನ ಮಾತ್ರ ಅನೇಕ ಕುಟುಂಬಗಳಲ್ಲಿ ಭಯ ಹುಟ್ಟಿಸಿರುವುದು ಸತ್ಯ.

ಅದರ ಪರಿಣಾಮವಾಗಿ ಕೆಲವು ಹುಡುಗರ ಪಾಲಕರು ಈಗ ವಿಚಿತ್ರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಮೀನು ಸದ್ಯ ನನ್ನ ಹೆಸರಲ್ಲೇ ಇರಲಿ, ಮಗನ ಹೆಸರಿಗೆ ಈಗಲೇ ವರ್ಗಾವಣೆ ಬೇಡ, ಮೊದಲು ಮದುವೆ ಆಗಲಿ, ನಂತರ ನೋಡೋಣ ಎಂಬ ಮಾತುಗಳು ಸಾಮಾನ್ಯವಾಗುತ್ತಿವೆ. ಕೆಲವರು ಹಾಸ್ಯವಾಗಿ ʻಇನ್ನು ಮುಂದೆ ಮದುವೆ ಬಯೋಡೇಟಾದಲ್ಲಿ blood group ನಂತರ land survey number ಕೂಡ ಹಾಕಬೇಕು ಅನ್ಸುತ್ತೆ!ʼ ಎಂದು ವ್ಯಂಗ್ಯ ಮಾಡುತ್ತಾರೆ.

ಆದರೆ, ಈ ಸಂಪೂರ್ಣ ಚಿತ್ರಣದಲ್ಲಿ ಮತ್ತೊಂದು ಮುಖವನ್ನೂ ಗಮನಿಸಬೇಕು. ಇಂದಿನ ಯುವತಿಯರು ಮತ್ತು ಅವರ ಕುಟುಂಬಗಳು ಆರ್ಥಿಕ ಭದ್ರತೆ, ನಗರ ಜೀವನದ ಸೌಕರ್ಯ, ಸ್ಥಿರ ಭವಿಷ್ಯ ಇವುಗಳನ್ನು ಬಯಸುವುದು ತಪ್ಪಲ್ಲ. ಇಂದಿನ ದುಬಾರಿ ಜೀವನದಲ್ಲಿ ಕೇವಲ ಒಳ್ಳೆಯ ಹುಡುಗ ಎಂಬುದಕ್ಕಿಂತ ಸ್ಥಿರ ಬದುಕು ಹೆಚ್ಚು ಮುಖ್ಯವಾಗಿರುವುದು ಸಹಜ. ಮದುವೆ ಎಂಬುದು ಭಾವನೆಯ ಜೊತೆಗೆ ಬದುಕಿನ ನಿರ್ವಹಣೆಯೂ ಆಗಿದೆ ಎಂಬ ವಾಸ್ತವವನ್ನು ನಿರಾಕರಿಸಲು ಸಾಧ್ಯವಿಲ್ಲ.

ಆದರೆ, ಮದುವೆ ಸಂಬಂಧವು ಎರಡು ಮನಸ್ಸುಗಳ ಸೇರ್ಪಡೆಯಾಗದೆ, “ರಿಯಲ್ ಎಸ್ಟೇಟ್ + Salary Package + Plantation Combo Offer” ಆಗಿ ಬದಲಾಗುವಾಗ ಅಲ್ಲಿ ಪ್ರೀತಿ, ಹೊಂದಾಣಿಕೆ, ಪರಸ್ಪರ ಗೌರವ ಇವೆಲ್ಲ ಚರಂಡಿಗೆ ಸರಿಯುತ್ತವೆ.

ಈ ಪರಿಸ್ಥಿತಿಯಿಂದಾಗಿ ಅನೇಕ ಹಳ್ಳಿಗಳಲ್ಲಿ ವಿಚಿತ್ರ ಮಾನಸಿಕ ಸ್ಥಿತಿ ನಿರ್ಮಾಣವಾಗುತ್ತಿದೆ. 40 ದಾಟಿದ ಹುಡುಗ ಮನೆಯ ಅಂಗಳದಲ್ಲಿ ಅಡಕೆ ಒಣಗಿಸುತ್ತಾ ಕುಳಿತಿದ್ದರೆ, ಒಳಗೆ ತಂದೆ-ತಾಯಿ “ಈ ವರ್ಷವಾದರೂ ಮಗನಿಗೆ ಮದುವೆಯಾದೀತಾ?” ಎಂಬ ಚಿಂತೆಯಲ್ಲಿ ದಿನ ಕಳೆಯುವಂತಾಗಿದೆ.

ಬಹುಶಃ ಮುಂದಿನ ದಿನಗಳಲ್ಲಿ ಮದುವೆ ಜಾಹೀರಾತುಗಳೇ ಹೀಗೆ ಬರಬಹುದು:
“ಬೆಂಗಳೂರಿನಲ್ಲಿ 2 ಲಕ್ಷ ಸಂಬಳ, ಎರಡು BHK ಫ್ಲ್ಯಾಟ್, SUV ಕಾರು, ಜೊತೆಗೆ ಐದು ಎಕರೆ ಅಡಕೆ ತೋಟ ಹೊಂದಿದ ವರ ಬೇಕು… ಆದರೆ ಮನಸ್ಸು ಒಳ್ಳೆಯದಿದ್ದರೆ ಹೆಚ್ಚುವರಿ ಆದ್ಯತೆ!”

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share